ವಿದ್ಯಾರ್ಥಿಗಳ ಹೋರಾಟ 56 ಇಂಚಿನ ಪ್ರಧಾನಿಯ ಎದೆಯಲ್ಲೂ ನಡುಕ ಹುಟ್ಟಿಸಿದೆ: ಸಂತೋಷ್ ಬಜಾಲ್
Friday, July 24, 2026
ಮಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರನ್ನಿಟ್ಟು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಹಿತ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟವು ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಈ ಹೋರಾಟವು 56 ಇಂಚಿನ ಪ್ರಧಾನಿಯ ಎದೆಯಲ್ಲೂ ನಡುಕ ಹುಟ್ಟಿಸಿದೆ ಎಂದು DYFI ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಹಗರಣದ ರುವಾರಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಹಾಗೂ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಆಹೋರಾತ್ರಿ ಹೋರಾಟವನ್ನು ಬೆಂಬಲಿಸಿ ನಗರದಲ್ಲಿಂದು SFI - DYFI ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
NTA ಪ್ರಾರಂಭವಾದ ಈವರೆಗೆ 89 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದೊಂದು ಅಸಮರ್ಥ ಸಂಸ್ಥೆಯಾಗಿದ್ದು ಇದನ್ನು ಕೂಡಲೇ ಕೇಂದ್ರ ಸರ್ಕಾರ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಮೇಲೆ ದೆಹಲಿ ಪೋಲಿಸರು ಹಾಗೂ ಬಿಜೆಪಿಯ ಗೂಂಡಾಗಳು ನಡೆಸಿದ ಧಾಳಿ ಅತ್ಯಂತ ಅಮಾನವೀಯ. ನ್ಯಾಯಯುತವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟವನ್ನು ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ಜನತೆ ಬೆಂಬಲಿಸಬೇಕೆಂದು ಹೇಳಿದರು.
DYFI ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಕಳೆದ 12 ವರ್ಷಗಳ ಅವಧಿಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಇಡೀ ಶಿಕ್ಷಣ ಕ್ಷೇತ್ರವನ್ನೇ ಹಾಳು ಮಾಡಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರೋ ನರೇಂದ್ರ ನಾಯಕ್, ಯಶವಂತ ಮರೋಳಿ, ಎಸ್.ಎಫ್ಐ ಜಿಲ್ಲಾ ಮುಖಂಡ ವಿನಾಯಕ್, ಮನೋಜ್ ವಾಮಂಜೂರು ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ವಿಚಾರವಾದಿ ನರೇಂದ್ರ ನಾಯಕ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ಚರಣ್ ಶೆಟ್ಟಿ, ಎಸ್.ಏಫ್.ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಿನುಶ ರಮಣ, ಮಹಮ್ಮದ್ ಅಜ್ಲಾನ್ , ಸಂದೇಶ್, ಅಲ್ಮಾಸ್, ಶ್ರಮ, ಕಾರ್ಮಿಕ ಸಂಘಟನೆಯ ಸುನೀಲ್ ಕುಮಾರ್ ಬಜಾಲ್ , ಯೋಗೀಶ್ ಜಪ್ಪಿನಮೊಗರು, ಬಾಲಕೃಷ್ಣ ಶೆಟ್ಟಿ, ಮಹಾಬಲ ದೆಪ್ಪೆಲಿಮಾರ್, ತಯ್ಯೂಬ್ ಬೆಂಗರೆ, ನೌಶದ್ ಬೆಂಗರೆ, ಅಸುಂತ ಡಿಸೋಜ, ಪ್ರಮಿಳಾ ಶಕ್ತಿನಗರ, ಯೋಗಿತಾ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.


