ಜಲಾವೃತವಾದ ಅಡಿಕೆ ತೋಟ
Friday, July 31, 2026
ಮಂಗಳೂರು: ಕುಲಶೇಖರ-ಸಾಣೂರು ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ಯೋಜನಾ ಅನುಷ್ಠಾನದಿಂದಾಗಿ ಎಡಪದವು ಪರಿಸರದಲ್ಲಿ ಕೃಷಿಕರು ಸಮಸ್ಯೆಗೆ ಸಿಲುಕಿದ್ದಾರೆ. ಫಸಲು ಬಿಟ್ಟು ನಳನಳಿಸಬೇಕಿದ್ದ ಅಡಿಕೆ ಮರಗಳು ಕೊಳೆಯುವ ಹಂತಕ್ಕೆ ತಲಪಿವೆ. ತೋಟಕ್ಕೆ ಇಳಿಯದ ರೀತಿ ನೀರು ಆವೃತವಾಗಿದೆ.
ಎಡಪದವು ಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡ ರಾ. ಹೆದ್ದಾರಿ ರಸ್ತೆಯ ಕಾಮಗಾರಿ ಸಮಸ್ಯೆಯಿಂದಾಗಿ ಹೊಸ ರಸ್ತೆಯೇ ಕುಸಿದಿರುವ ಜತೆಗೆ ಎಡಪದವು, ಶಿಬ್ರಿಕೆರೆ, ತೆಂಕ ಎಡಪದವಿನ ಕೃಷಿಕರ ತೋಟಕ್ಕೆ ಮಳೆ ನೀರು ನುಗ್ಗಿ ಈ ಸಮಸ್ಯೆ ಎದುರಾಗಿದೆ.
ಒಂದೆಡೆ ಎಡಪದವು ಗುಡ್ಡ ಭಾಗದಲ್ಲಿ ಸುರಿಯುವ ಮಳೆ ನೀರು ಯಾವುದೇ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ತೆಂಕ ಎಡಪದವು ಕಡೆಗೆ ಹರಿದು ನೇರವಾಗಿ ಅಡಿಕೆ ತೋಟ, ಗದ್ದೆಗೆ ಸೇರಿಕೊಂಡಿದೆ. ಇನ್ನೊಂದೆಡೆ ಇದರ ವಿರುದ್ಧ ದಿಕ್ಕಿನಲ್ಲಿ ಗುಡ್ಡದಿಂದ ಹರಿದು ಬರುವ ನೀರು ಹರಿದು ಹೋಗುವುದಕ್ಕೆ ಜಾಗವಿಲ್ಲದ ಕಾರಣ ಹೆದ್ದಾರಿ ಪಕ್ಕ 100 ಮೀಟರ್ ಗೂ ಅಧಿಕ ದೂರಕ್ಕೆ 15-20 ಅಡಿಯಷ್ಟು ನೀರು ತುಂಬಿ ನಿಂತಿದೆ.
ಇಲ್ಲಿ ಅಡಿಕೆ ತೋಟದಲ್ಲಿರುವ ಪಂಪ್, ಸ್ಪ್ರಿಂಕ್ಲರ್ ಎಲ್ಲವೂ ಸದ್ಯ ನೀರಿನಡಿ ಇದೆ, ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ತೋಟದಲ್ಲಿ 20 ಅಡಿಗೂ ಅಧಿಕ ನೀರು ತುಂಬಿ ನಿಂತಿದ್ದು ಮರ ಕೊಳೆಯುವ ಭೀತಿ ಎದುರಾಗಿದೆ.