ಗ್ರಂಥಾಲಯ ಜ್ಞಾನದ ಆವಿಷ್ಕಾರಿ ಕೇಂದ್ರ: ಡಾ. ಮೈಕೆಲ್ ಲಿಗೋರಿ ಸಂತುಮಯೋರ್
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಅಬ್ಬರದಿಂದಾಗಿ ಜನರು ಪುಸ್ತಕ ಓದಿನಿಂದ ದೂರ ಸರಿಯುತ್ತಿರುವ ಬೆನ್ನಲ್ಲೇ, ಅವರನ್ನು ಮತ್ತೆ ಅಕ್ಷರ ಲೋಕದತ್ತ ಆಕರ್ಷಿಸುವಲ್ಲಿ ಗ್ರಂಥಪಾಲಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಂಥಾಲಯಗಳು ಕೇವಲ ಮಾಹಿತಿ ಸಂಗ್ರಹಾಗಾರಗಳಲ್ಲ, ಅವು ಸಮುದಾಯವನ್ನು ಬೆಸೆಯುವ ಪ್ರಮುಖ ಕೊಂಡಿಗಳು ಎಂದರು.
ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ.ವಿ. ಅವರು ಮಾತನಾಡಿ, ಇಂದು ಗ್ರಂಥಾಲಯಗಳು ಪುಸ್ತಕಗಳ ಸಂಗ್ರಹದಿಂದ ಕ್ರೀಯಾತ್ಮಕ ಜ್ಞಾನ ಕೇಂದ್ರವಾಗಿ ಬದಲಾಗಿದೆ. ಗ್ರಂಥಾಲಯಗಳು ಸಮುದಾಯವನ್ನು ತಲುಪುವ ಕೆಲಸವಾಗಬೇಕು. ಗ್ರಂಥಾಲಯಗಳ ಯಶಸ್ಸು ಕೇವಲ ಅಲ್ಲಿರುವ ಪುಸ್ತಕಗಳ ಸಂಖ್ಯೆಯ ಮೇಲೆ ನಿರ್ಧಾರವಾಗುವುದಿಲ್ಲ, ಬದಲಿಗೆ ಅದು ಎಷ್ಟು ಜನರನ್ನು ತಲುಪುತ್ತಿದೆ ಎಂಬುದರ ಮೇಲೆ ನಿಂತಿದೆ. ಹಳ್ಳಿ ಮತ್ತು ನಗರಗಳ ಗಲ್ಲಿ ಗಲ್ಲಿಗಳಿಗೂ ಗ್ರಂಥಾಲಯದ ಸೇವೆ ವಿಸ್ತರಿಸಬೇಕಿದೆ ಎಂದರು.
ರಾಜ್ಯ ಗ್ರಂಥಾಲಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶೇಖರ ಎಚ್.ಪಿ. ಅವರು ಪದಗ್ರಹಣ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.
ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ಎಸ್. ಎಲ್. ಕಾಡದೇವರಮಠ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥಾಲಯ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ, ಪ್ರೊ. ವಿ.ಜಿ. ತಳವಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಘಟಕ ಅಧ್ಯಕ್ಷೆ ಡಾ. ವಿಶಾಲಾ ಬಿ.ಕೆ. ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಡಾ. ಸುಪ್ರೀತಾ ಜೆ. ಶೆಟ್ಟಿ ವಂದಿಸಿದರು. ಡಾ. ಮಮತಾ ಪ್ರಮೋದ್ ಮತ್ತು ಡಾ. ಫಾಲ್ಸಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಡಿಜಿಟಲ್ ತಂತ್ರಜ್ಞಾನದ ಸದ್ಬಳಕೆ ಹಾಗೂ ಗ್ರಂಥಪಾಲಕರ ಸೃಜನಶೀಲ ಪ್ರಯತ್ನಗಳಿಂದ ಮಾತ್ರ ಇಂದಿನ ಸಮಾಜದಲ್ಲಿ ಮತ್ತೆ ಓದಿನ ಸಂಸ್ಕೃತಿಯನ್ನು ಜೀವಂತವಾಗಿಡಲು ಸಾಧ್ಯವಿದೆ. ವಿವಿಧ ರೀತಿಯ ಹೋರಾಟಗಳು ಸಂಘದ ಮೂಲಕ ನಡೆದಿದ್ದು, ಸಂಘದ ಕಾರ್ಯದಿಂದಾಗಿ ಸಿ ದರ್ಜೆಯಲ್ಲಿದ್ದ ಗ್ರಂಥಪಾಲಕರ ಹುದ್ದೆಯಲ್ಲಿ ಬಿ ದರ್ಜೆ ಲಭಿಸಿದೆ. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸಂಘವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಕೆಲಸ ಆಗುತ್ತಿದೆ. -ಡಾ. ಎಸ್.ಎಲ್. ಕಾಡದೇವರಮಠ, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ
