ಎಸ್‌ಐಆರ್‌ನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಹಚ್ಚಿ: ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ

ಎಸ್‌ಐಆರ್‌ನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಹಚ್ಚಿ: ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ


ಮಂಗಳೂರು: ಎಸ್‌ಐಆರ್‌ನ್ನು ಗಂಭೀರವಾಗಿ ಪರಿಗಣಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಸಹಿತ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಹಚ್ಚಲು ಬಳಸಬೇಕು. ಈ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸಿ ಎಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶಿ ನಾಗರಿಕರು ಅಕ್ರಮವಾಗಿ ದೇಶದ ಒಳಗೆ ನುಸುಳಿ ಬಂದಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಕ್ಕದಲ್ಲಿ ಹಾಗೂ ಕೋಡಿಕಲ್‌ನಲ್ಲಿ ೧೬ ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ಪೊಲೀಸ್ ಇಲಾಖೆ ಈಗಾಗಲೇ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅವರ ಸಂಖ್ಯೆ ನೂರಾರು ದಾಟುವ ಸಾಧ್ಯತೆ ಇದೆ. ಆದ್ದರಿಂದ ವಲಸಿಗರನ್ನು ಪತ್ತೆಹಚ್ಚಲು ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಜಿಲ್ಲಾ ಆಡಳಿತವು ಎಸ್‌ಐಆರ್ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದಲ್ಲಿ ರಾಜ್ಯದ ಆಂತರಿಕ ಭದ್ರತೆಗೆ ದೊಡ್ಡ ಅಪಾಯ ಎದುರಾಗಲಿದೆ. ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಮಾಡಿಸಿಕೊಡುವ ಗುತ್ತಿಗೆಯನ್ನು ಕೆಲವು ಕಾರ್ಮಿಕ ಎಜಂಟ್‌ಗಳು ವಹಿಸಿಕೊಂಡಿದ್ದು, ಅವರಿಗೆ ಬಾಡಿಗೆ ಮನೆ ದೊರಕಿಸಿಕೊಡುವಲ್ಲಿಯೂ ನೆರವಾಗುತ್ತಿದ್ದಾರೆ. ಈ ರೀತಿಯ ಷಡ್ಯಂತ್ರವನ್ನು ಬೇರು ಸಹಿತ ಕಿತ್ತು ಹಾಕಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಂಟಿಯಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ, ಜಿಲ್ಲೆಯಾದ್ಯಂತ ತೀವ್ರ ತಪಾಸಣೆ ನಡೆಸಲು ಪೊಲೀಸ್ ಇಲಾಖೆಗೆ ಎಲ್ಲಾ ಅಧಿಕಾರ ನೀಡಬೇಕು ಎಂದು ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

ಇದರೊಂದಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ನಕಲಿ ದಾಖಲೆ ಮಾಡಿ ಮತದಾನ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ಗಂಭೀರ ತನಿಖೆ ನಡೆಸಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಅದಕ್ಕೆ ಸಂಪೂರ್ಣವಾಗಿ ಜಿಲ್ಲಾಡಳಿತವೇ ಹೊಣೆ. ಆದ್ದರಿಂದ ಪ್ರತಿ ಮನೆಗೂ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿ ಬಾಡಿಗೆಗೆ ನೀಡಲಾಗಿರುವ ಪ್ರತಿ ಮನೆಯ ದತ್ತಾಂಶವನ್ನು ಸಂಗ್ರಹಿಸಿ, ಅಲ್ಲಿ ವಾಸಿಸುವವರು ದೇಶದ ನಾಗರಿಕರೇ ಅಥವಾ ಅಕ್ರಮವಾಗಿ ನುಸುಳಿದವರೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸ್ಥಳೀಯವಾಗಿ ಅವರಿಗೆ ನಕಲಿ ದಾಖಲೆ ಮಾಡಿಕೊಡಲು ನೆರವಾಗುತ್ತಿರುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲು ನಡೆಸುತ್ತಿರುವ ಅಭಿಯಾನಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜಕೀಯ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಸಹಕಾರ ನೀಡಬೇಕು. ದೇಶದ ಹಿತಕ್ಕಾಗಿ ಕೇಂದ್ರದೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕೆಂದು ಶಾಸಕ ಡಾ. ಭರತ್ ಶೆಟ್ಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article