ದ.ಕ. ಜಿಲ್ಲೆಯಲ್ಲಿ ದಿನವಿಡೀ ಬಿಟ್ಟುಬಿಟ್ಟು ಉತ್ತಮ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ದಿನವಿಡೀ ಬಿಟ್ಟುಬಿಟ್ಟು ಉತ್ತಮ ಮಳೆಯಾಗಿದೆ. ಬೆಳಗಿನ ಜಾವದಿಂದಲೇ ಆರಂಭವಾದ ಮಳೆಯು ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಸೂರ್ಯನ ಪ್ರಖರ ದರ್ಶನದಿಂದ ವಾತಾವರಣ ಕೆಲವೊಮ್ಮೆ ಬಿಸಿಯೇರುತ್ತಿದ್ದು, ದಿನವಿಡೀ ಮೋಡಕವಿದ ವಾತಾವರಣ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚೇ ಇತ್ತು. ಇತ್ತ ಮಂಗಳೂರು ನಗರ, ಕೋಣಾಜೆ, ಮೂಲ್ಕಿ, ಪಣಂಬೂರು ಹಾಗೂ ಉಳ್ಳಾಲದಲ್ಲೂ ದಿನದಲ್ಲಿ ಹಲವು ಬಾರಿ ಉತ್ತಮ ಮಳೆಯಾಗಿದೆ. ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಕರಾವಳಿ ತೀರ ಪ್ರದೇಶದ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
ಶನಿವಾರ ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲು, ಮೋಡ ಹಾಗೂ ಸಂಜೆ, ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೋಡ ಹಾಗೂ ಮಧ್ಯಾಹ್ನ, ಸಂಜೆ, ರಾತ್ರಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೆ ಮೋಡ ಹಾಗೂ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ ಇದೆ.
51 ಮಿ.ಮೀ ಮಳೆ ದಾಖಲು
ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 58 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಉಳ್ಳಾಲದಲ್ಲಿ 70 ಮಿಮಿ ಮಳೆಯಾಗಿದೆ. ಮೂಡುಬಿದಿರೆ 43 ಮಿ.ಮೀ, ಕಡಬದಲ್ಲಿ 31 ಮಿಮಿ, ಬೆಳ್ತಂಗಡಿ 42 ಮಿ.ಮೀ, ಬಂಟ್ವಾಳ 33.4 ಮಿ.ಮೀ, ಪುತ್ತೂರು 36.1 ಮಿ.ಮೀ, ಮಂಗಳೂರಿನಲ್ಲಿ 67.1 ಮಿಮಿ ಮಳೆಯಾಗಿದೆ. ಸುಳ್ಯದಲ್ಲಿ 64.1 ಮಿ.ಮೀ., ಮೂಲ್ಕಿ 52.1 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 6.080 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.6 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.465 ಮೀ, ಗುರುಪುರ ನದಿ (ಅಡ್ಡೂರು) 2.7 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಸುಳ್ಯ, ಸಂಪಾಜೆ ಘಾಟಿಯ ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಿರಬಹುದು. ಈಗಿನಂತೆ ಗುಜರಾತ್ ತಿರುಗುವಿಕೆಯು ಶಿಥಿಲಗೊಳ್ಳುತ್ತಿದ್ದಂತೆಯೇ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಆದರೆ ಬಂಗಾಳಕೊಲ್ಲಿಯ ಮತ್ತೆ ವಾಯುಭಾರ ಕುಸಿತ ಉಂಟಾದರೆ ಮುಂಗಾರು ಚುರುಕಾಗಬಹುದು.