ನಿರ್ಲಕ್ಷ್ಯದಿಂದ ರಸ್ತೆ ಬ್ಲಾಕ್: ಸಾರಿಗೆ ಕಂಪೆನಿ ಮಾಲಕನ ವಿರುದ್ಧ ಪ್ರರಕರಣ
ಮಂಗಳೂರು: ಪಣಂಬೂರು ಬೀಚ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಚಾಲಕನ ನಿರ್ಲಕ್ಷ್ಯದಿಂದಾಗಿ ಬೃಹತ್ ಗಾತ್ರದ ಟ್ರೇಲರ್ ವಾಹನ ಹೆದ್ದಾರಿಯಲ್ಲಿ ಸಿಲುಕಿ ಭಾನುವಾರ ಸಂಜೆ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಗೆ ಚಾಲಕನ ನಿರ್ಲಕ್ಷ್ಯ ಮತ್ತು ಕಂಪನಿ ಅಧಿಕಾರಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಕಾರಣ ಎಂಬುದನ್ನು ಮನಗಂಡು ಮಂಗಳೂರು ಉತ್ತರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಎನ್‌ಎಂಪಿಎ ಬಂದರಿಗೆ ಆಗಮಿಸಿದ್ದ ವಾಹನ ಸರಕನ್ನು ಇಳಿಸಿ ಭಾನುವಾರ ಸಂಜೆ ಹೊರಬಂದಿತ್ತು. ಆದರೆ ಬೀಚ್ ರಸ್ತೆಯಿಂದ ಹೆದ್ದಾರಿಗೆ ಸೇರುವ ಸಂದರ್ಭದಲ್ಲಿ ಟ್ರೇಲರ್ ಮುಂಭಾಗ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು ಹಿಂಭಾಗ ಪೂರ್ತಿಯಾಗಿ ಹೆದ್ದಾರಿಗೆ ಅಡ್ಡಲಾಗಿ ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಂಗಳೂರು-ಸುರತ್ಕಲ್ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ಎರಡು ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಪ್ರಾಥಮಿಕ ತನಿಖೆಯಲ್ಲಿ, ಸಂಬಂಧಿಸಿದ ಬೃಹತ್ ಟ್ರೇಲರ್ ವಾಹನವು ರಸ್ತೆ ಸಂಚಾರಕ್ಕೆ ಅಗತ್ಯವಿರುವ ಅನುಮತಿ ಪಡೆಯದೇ/ಮಾಹಿತಿ ನೀಡದೇ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಬೃಹತ್ ಯಂತ್ರೋಪಕರಣವನ್ನು ಸಾಗಾಟ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಟ್ರೇಲರ್ ವಾಹನದ ಚಾಲಕ ವಿನೋದ್ ಕುಮಾರ್ ಸಿಂಗ್, ಇಎಕ್ಸ್‌ಜಿ ಎಕ್ಸ್‌ಪ್ರೆಸ್ ಗ್ಲೋಬಲ್ ಲಾಜಿಸ್ಟಿಕ್ ಟ್ರಾನ್ಸ್ ಪೋರ್ಟ್ ಕಂಪನಿಯ ಮಾಲಕ ಹಾಗೂ ಯಂತ್ರೋಪಕರಣ ಸಾಗಾಟಕ್ಕೆ ಸಂಬಂಧಿಸಿದ ಕಂಪನಿಯ ಅಧಿಕಾರಿಗಳ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 173/2026 ಕಲಂ 281, 285 ಬಿ.ಎನ್.ಎಸ್ ಮತ್ತು 184, 201 ಐ.ಎಂ.ವಿ ಅಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನ ಸಂಚಾರದ ಸುಗಮ ಸಂಚಾರದ ದೃಷ್ಟಿಯಿಂದ ಬೃಹತ್ ಗಾತ್ರದ ವಾಹನಗಳ ಚಾಲನೆ ಸಂದರ್ಭದಲ್ಲಿ ಮತ್ತು ಸಾಗಾಟ ಸಂಸ್ಥೆಗಳು ನಿಯಮಾನುಸಾರ ಅನುಮತಿ ಪಡೆದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.