ಪಶ್ಚಿಮ ಘಟ್ಟ-ಬೆಟ್ಟ ಕೊರೆಯುದಕ್ಕೆ ನಿಯಂತ್ರಣ: ಕಠಿಣ ಕಾನೂನಿಗೆ ಆಗ್ರಹ

ಪಶ್ಚಿಮ ಘಟ್ಟ-ಬೆಟ್ಟ ಕೊರೆಯುದಕ್ಕೆ ನಿಯಂತ್ರಣ: ಕಠಿಣ ಕಾನೂನಿಗೆ ಆಗ್ರಹ

ಮಂಗಳೂರು: ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಟ್ಟ ಕೊರೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಠಿಣ ಕಾನೂನನ್ನು ತಕ್ಷಣ ಜಾರಿಗೆ ತರಬೇಕು ಎಂದು ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ರಾಜ್ಯದಲ್ಲಿ ಸಂಭವಿಸುತ್ತಿರುವ ಭೀಕರ ಭೂ ಕುಸಿತಗಳು ಹಾಗೂ ತಡೆಗೋಡೆ ಕುಸಿತಗಳಿಗೆ ಹವಾಮಾನ ವೈಪರೀತ್ಯದಿಂದ ಉಂಟಾಗುತ್ತಿರುವ ಅತಿವೃಷ್ಟಿ ಮತ್ತು ಮಿತಿಮೀರಿದ ಅವೈಜ್ಞಾನಿಕ ಹಾಗೂ ಅನಿಯಂತ್ರಿತ ಬೆಟ್ಟ ಕೊರೆಯುವಿಕೆ ಕಾರಣವಾಗಿದೆ. ಪರಿಸರದ ದೃಷ್ಟಿಯಿಂದ ಕರಾವಳಿ ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳು ಅತ್ಯಂತ ಸೂಕ್ಷ್ಮವಾಗಿವೆ. ಇಲ್ಲಿ ನಿಯಂತ್ರಣವಿಲ್ಲದ ಬೆಟ್ಟ ಕೊರೆಯುವಿಕೆ ನಿರಂತರವಾಗಿ ನಡೆಯುತ್ತಿದೆ. ಸ್ಥಳೀಯ ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳು ಈ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ವಿಷಾದನೀಯ ಎಂದು ಆಪ್ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಸುಮಾರು 10 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿಯೂ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಅನೇಕ ಜೀವಗಳು ಬಲಿಯಾಗಿದ್ದವು. ಈ ಘಟನೆಗಳಿಂದಲೂ ಸರಕಾರ ಅಗತ್ಯ ಪಾಠ ಕಲಿತಿಲ್ಲ ಎಂದರು.

ನೆರೆಯ ಗೋವಾದಲ್ಲಿ ಬೆಟ್ಟ ಕೊರೆಯುವಿಕೆ ನಿಯಂತ್ರಿಸುವ ಕಠಿಣ ಕಾನೂನು ಜಾರಿಯಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಕೆಲವು ಗ್ರಾಮಗಳನ್ನು ’ಅಭಿವೃದ್ಧಿ ರಹಿತ ವಲಯಗಳು’ ಎಂದು ಘೋಷಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಸರಕಾರವೂ ಈ ಮಾದರಿಯನ್ನು ಅನುಸರಿಸುವ ಅಗತ್ಯವಿದೆ. ಹೆಚ್ಚು ಅಪಾಯವಿರುವ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ’ಅಭಿವೃದ್ಧಿ ರಹಿತ ವಲಯಗಳು’ ಎಂದು ಘೋಷಿಸಬೇಕು. ಅವೈಜ್ಞಾನಿಕ ಕಾಮಗಾರಿಗಳಿಂದ ಅಪಾಯ ಎದುರಾದರೆ ಸರಕಾರಿ ಸಂಸ್ಥೆಗಳು, ಗುತ್ತಿಗೆದಾರರು ಹಾಗೂ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಹೊಣೆಗಾರರನ್ನಾಗಿ ಮಾಡಬೇಕು. ಭೂಕುಸಿತದ ಅಪಾಯವಿರುವ ಪ್ರದೇಶಗಳಲ್ಲಿ ಸ್ವತಂತ್ರ ತಜ್ಞರ ಸಮಿತಿಯಿಂದ ವೈಜ್ಞಾನಿಕ ಪರಿಶೀಲನೆ ನಡೆಸಿ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ವಾಸುದೇವ್, ಪ್ರಮುಖರಾದ ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೊ, ಹಬೀಬ್ ಖಾದರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article