ಹೊರ್ಮುಜ್ ಸಂಘರ್ಷ: ಉಪ್ಪಿನಂಗಡಿಯ ಯುವಕ ಪಾರು

ಹೊರ್ಮುಜ್ ಸಂಘರ್ಷ: ಉಪ್ಪಿನಂಗಡಿಯ ಯುವಕ ಪಾರು

ಮಂಗಳೂರು: ಒಮಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಸಂಘರ್ಷ ತಲೆದೋರಿದ್ದು, 11 ಮಂದಿ ಭಾರತೀಯರಿದ್ದ ಕಾರ್ಗೋ ಹಡಗಿನ ಮೇಲೆ ಇರಾನ್ ಸೈನಿಕರು ದಾಳಿ ನಡೆಸಿದ ಘಟನೆಯಲ್ಲಿ ಪುಣೆ ಮೂಲದ ಯುವಕ ನಾಪತ್ತೆಯಾಗಿದ್ದು ಹಡಗಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಯುವಕ ಅಪಾಯದಿಂದ ಪಾರಾಗಿದ್ದಾರೆ.

ಸೈಪ್ರಸ್ ಧ್ವಜ ಹೊಂದಿದ್ದ ಎಂ.ವಿ ಜಿಎಫ್‌ಎಸ್ ಗ್ಯಾಲಕ್ಸಿ ಹೆಸರಿನ ಹಡಗಿನ ಮೇಲೆ ಶನಿವಾರ ಮಧ್ಯರಾತ್ರಿ ಇರಾನಿನ ಐಆರ್ ಜಿಸಿ ಪಡೆಗಳು ಬಾಂಬ್ ದಾಳಿ ನಡೆಸಿವೆ. ಈ ವೇಳೆ, ಹಡಗಿನ ಇಂಜಿನ್ ಭಾಗ ಹೊತ್ತಿ ಉರಿದಿದ್ದು, ಹಡಗಿನಲ್ಲಿ 20ಕ್ಕೂ ಹೆಚ್ಚು ಸಿಬಂದಿ ಇದ್ದರು. ಕೂಡಲೇ ರಕ್ಷಣೆ ನೀಡುವಂತೆ ಸ್ಥಳೀಯ ಸೇನಾ ಪಡೆಗಳಿಗೆ ಕೋರಿಕೆ ಸಲ್ಲಿಸಲಾಗಿತ್ತು. ಬೆಳಗ್ಗೆ 5.30ರ ವೇಳೆಗೆ ಒಮಾನ್ ಸೇನೆಯು ರಕ್ಷಣೆಗೆ ಧಾವಿಸಿತ್ತು. ಅಷ್ಟರಲ್ಲಿ ಲೈಫ್ ಬೋಟ್ ಮೂಲಕ ಅಪಾಯದಿಂದ ಪಾರಾಗಿದ್ದ ಸಿಬಂದಿ ಸಮುದ್ರಕ್ಕೆ ಹಾರಿದ್ದರು. ಕೆಲವರಿಗಷ್ಟೇ ಅಲ್ಪಸ್ವಲ್ಪ ಗಾಯಗಳಾಗಿವೆ.

ಉಪ್ಪಿನಂಗಡಿ ಬಿಳಿಯೂರು ನಿವಾಸಿ ಕಳೆದ ಎರಡು ವರ್ಷಗಳಿಂದ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ಈ ಬಾರಿ ಮೂರನೇ ಹಡಗಿನಲ್ಲಿ ಕಾರ್ಗೋ ಇನ್ ಚಾರ್ಜ್ ಆಗಿ ಕೆಲಸ ಮಾಡಿಕೊಂಡಿದ್ದರು. ಹೊರ್ಮುಜ್ ಜಲಸಂಧಿಯಲ್ಲಿ ಬರುವ ವೇಳೆಗೆ ದಾಳಿಯಾಗುವ ಸಾಧ್ಯತೆ ಇದೆಯೆಂದು ತನ್ನ ಕುಟುಂಬಸ್ಥರಿಗೂ ತಿಳಿಸಿದ್ದರು. ಆ ಭಾಗದಲ್ಲಿ ಅಮೆರಿಕ- ಇರಾನ್ ಸಂಘರ್ಷ ಮತ್ತೆ ಎದುರಾಗಿದ್ದರಿಂದ ದಾಳಿ ಸಾಧ್ಯತೆ ಬಗ್ಗೆ ಸುಳಿವುಗಳಿದ್ದವು.

ನಡುರಾತ್ರಿ ವೇಳೆಗೆ ಇರಾನ್ ಕರಾವಳಿಯಿಂದ ತೆರಳುತ್ತಿದ್ದಾಗಲೇ ಸೇನಾ ಪಡೆಗಳು ಕ್ಷಿಪಣಿ ದಾಳಿ ಮಾಡಿದ್ದು, ಈ ವೇಳೆ ಒಬ್ಬ ಸಿಬಂದಿಯನ್ನು ಬಿಟ್ಟು ಉಳಿದೆಲ್ಲರೂ ಬಚಾವ್ ಆಗಿದ್ದಾರೆ. ಸದ್ಯಕ್ಕೆ ಇವರನ್ನು ಒಮಾನ್ ಸೇನಾ ಪಡೆ ಕರೆದೊಯ್ದಿದ್ದು, ಸುರಕ್ಷಿತ ಜಾಗದಲ್ಲಿ ಇರಿಸಿದೆ. ಪುಣೆ ಮೂಲದ ಇಂಜಿನಿಯರ್ ಯುವಕನೊಬ್ಬ ಇಂಜಿನ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದಾಗ ಅಪಾಯಕ್ಕೀಡಾಗಿ ನಾಪತ್ತೆಯಾಗಿದ್ದಾರೆ. ಕಾರ್ಗೋ ಹಡಗನ್ನು ಸದ್ಯ ಒಮಾನ್ ಕರಾವಳಿಯಲ್ಲಿ ಲಂಗರು ಹಾಕಲಾಗಿದೆ. ಸೈಪ್ರಸ್ ಮೂಲದ ಬೃಹತ್ ಹಡಗು ಸ್ಟೀಲ್ ಇನ್ನಿತರ ಸರಕುಗಳನ್ನು ಹೊತ್ತುಕೊಂಡು ಸಿಂಗಾಪುರದತ್ತ ತೆರಳುತ್ತಿತ್ತು.

ಪದವಿ ಮುಗಿಸಿ ಮುಂಬೈನಲ್ಲಿ ಮೆರೈನ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿದ್ದ ಉಪ್ಪಿನಂಗಡಿಯ ಯುವಕ ಆಬಳಿಕ ಹಡಗಿನಲ್ಲಿ ಕೆಲಸಕ್ಕೆ ಸೇರಿದ್ದು 9 ತಿಂಗಳಿಗೊಮ್ಮೆ ಊರಿಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಈ ಬಾರಿ ಸಿಂಗಾಪುರ ಟ್ರಿಪ್ ಮುಗಿಸಿ ಇನ್ನೊಂದು ತಿಂಗಳಲ್ಲಿ ಊರಿಗೆ ಬರುವುದಕ್ಕೆ ರೆಡಿ ಮಾಡಿಕೊಂಡಿದ್ದರು. ಸದ್ಯಕ್ಕೆ ಒಮಾನ್ ದೇಶದಲ್ಲಿ ಸುರಕ್ಷಿತ ಆಗಿರುವುದಾಗಿ ಯುವಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article