ಸರಕಾರಿ ಯೋಜನೆಗಳ ಅರ್ಜಿ ವಿಲೇವಾರಿ ನಿರಾಸಕ್ತಿ: ಜಿ.ಪಂ. ಸಿಇಓ ಅಸಮಾಧಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ್ಯೇತರ ವಲಯದಲ್ಲಿ ಸಾಲ ನೀಡದೆ, ಸರಕಾರಿ ಯೋಜನೆಗಳ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸದ ಮತ್ತು ನಿಗದಿತ ಪ್ರಗತಿ ಸಾಧಿಸದ ಕೆಲವು ಬ್ಯಾಂಕ್‌ಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಬ್ಯಾಂಕಿನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹೆಚ್ಚಿನ ಬ್ಯಾಂಕ್ಗಳು ಅದರಲ್ಲೂ ಕೆಲವು ಖಾಸಗಿ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲಿ ಠೇವಣಿ ಸಂಗ್ರಹಿಸಿದ್ದರೂ, ಸಾಲ ನೀಡಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸದಿರುವ ವಿಚಾರವನ್ನು ಗಮನಿಸಿದ ಅವರು ಸಾಲ ನೀಡಲು ಆದ್ಯತೆ ಕೊಡಬೇಕು ಎಂದು ಎಚ್ಚರಿಕೆ ನೀಡಿದರು
ಕೆಲವು ಬ್ಯಾಂಕ್ಗಳ ಜಿಲ್ಲೆಯ ಉನ್ನತ ಅಧಿಕಾರಿಗಳು ಬಾರದೆ ಇರುವ ವಿಚಾರವನ್ನು ಪ್ರಶ್ನಿಸಿದ ಅವರು ಡಿಜಿಎಂಗಳಿಗೆ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಒಂದು ದಿನ ಮೊದಲೇ ತಿಳಿಸಬೇಕು ಎಂದು ಸೂಚನೆ ನೀಡಿದರು.
ಸಭೆಗೆ ಗೈರು ಹಾಜರಾದ ಇಲಾಖಾ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದರು.
ಅಂಬೇಡ್ಕರ್ ನಿಗಮದ ಸಾಲ ಯೋಜನೆ ಅರ್ಜಿ ಬ್ಯಾಂಕ್‌ಗಳಲ್ಲಿ ಬಾಕಿಯಾಗಿವೆ. ಉದ್ಯೋಗಿನಿ ಯೋಜನೆಯಲ್ಲಿ ಒಟ್ಟು 72 ಗುರಿ ಪೈಕಿ, 22 ಅರ್ಜಿಗಳಿಗೆ ಸಾಲ ನೀಡಿದ್ದು, 10 ತಿರಸ್ಕರಿಸಿ, 19 ಅರ್ಜಿ ಬ್ಯಾಂಕಿನಲ್ಲಿ ಬಾಕಿಯಾಗಿವೆ. ಪಿಎಂ ವಿಶ್ವಕರ್ಮ ಯೋಜನೆಗೆ ಒಟ್ಟು 5,292 ಅರ್ಜಿ ಸಲ್ಲಿಕೆಯಾಗಿದ್ದು, 3,692 ಸ್ವೀಕೃತವಾಗಿವೆ. 1,450 ತಿರಸ್ಕೃತಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಡಿಜಿಎಂ ವೆಂಕಟ ವರಪ್ರಸಾದ್, ಭಾರತೀಯ ರಿಸರ್ವ್ ಬ್ಯಾಂಕಿನ ಎಜಿಎಂ ಅರುಣ್ ಕುಮಾರ್ ಪಿ., ನಬಾರ್ಡ್ ಅಧಿಕಾರಿ ಸಂಗೀತ ಕರ್ತಾ ಪೂರಕ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಗೀತಾ ಯಶೋಧರ್ ಕಾರ್ಯಕ್ರಮ ನಿರೂಪಿಸಿದರು.