ಮಂಗಳೂರು ವಿಮಾನ ನಿಲ್ದಾಣ: ಅನಾವರಣಗೊಂಡ ’ಕಂಬಳ’ ಕಲಾಕೃತಿ
ಆಂತರಿಕ ವಿಮಾನಗಳ ಬ್ಯಾಗೇಜ್ ಬೆಲ್ಟ್ ಬಳಿ ಈಗಾಗಲೇ ಮೊದಲ ಕಂಬಳ ಕಲಾಕೃತಿ ಪ್ರಯಾಣಿಕರನ್ನು ಆಕರ್ಷಿಸುತ್ತಿದ್ದು, ಇದೀಗ ಎರಡನೇ ಕಲಾಕೃತಿಯು ಮಂಗಳೂರಿಗೆ ಕಾಲಿಡುವ ಪ್ರತಿ ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ.
ಕರಾವಳಿ ಕರ್ನಾಟಕ ಹಾಗೂ ತುಳುನಾಡಿನ ಸಂಸ್ಕೃತಿ ಮತ್ತು ಪಾರಂಪರಿಕ ಕಲೆಗಳನ್ನು ಪ್ರವಾಸಿಗರಿಗೆ ತೀರಾ ಹತ್ತಿರದಿಂದ ಅನುಭವಿಸುವಂತೆ ಮಾಡುವುದು ವಿಮಾನ ನಿಲ್ದಾಣದ ಉದ್ದೇಶವಾಗಿದೆ. ಈ ಹಿಂದೆ ನಿರ್ಗಮನ ವಿಭಾಗದ ಸಮೀಪದ ರೌಂಡ್ ಎಬೌಟ್ ಬಳಿ ಬೃಹತ್ ಗ್ರಾನೈಟ್ನಿಂದ ಕೆತ್ತಲಾದ ಯಕ್ಷಗಾನ ಕಲಾವಿದನ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಸಾಂಸ್ಕೃತಿಕ ಕಲಾಕೃತಿಗಳು..
ಕಂಬಳ ಕಲಾಕೃತಿಗಳು: ಬ್ಯಾಗೇಜ್ ಕ್ಲೇಮ್ ಬೆಲ್ಟ್ ಹಾಗೂ ಆಗಮನ ವಿಭಾಗದ ಕೆಳಗಿನ ಮಹಡಿಯಲ್ಲಿ ಕೋಣಗಳ ಓಟದ ಕಂಬಳದ ದೃಶ್ಯಾವಳಿ.
ಪಿಲಿವೇಷ (ಹುಲಿವೇಷ) ಸ್ಥಿರಚಿತ್ರ: ಕರಾವಳಿಯ ಜನಪ್ರಿಯ ಜಾನಪದ ನೃತ್ಯ ಹುಲಿವೇಷದ ಪ್ರತಿಕೃತಿ.
ಯಕ್ಷಗಾನ ಜೀವಂತ ಪ್ರತಿಮೆಗಳು: ಆಗಮನ ವಿಭಾಗಕ್ಕೆ ಸಂಪರ್ಕಿಸುವ ಟ್ರಾವೆಲೇಟರ್ ಬಳಿ ಎರಡು ನೈಜ ರೂಪದ ಯಕ್ಷಗಾನ ಪ್ರತಿಮೆಗಳು.
ಯಕ್ಷಗಾನ ಮುಖವಾಡ ಹಾಗೂ ಕಿರೀಟ: ಆಂತರಿಕ ಆಗಮನ ವಿಭಾಗ ಹಾಗೂ ಕೆಳಗಿನ ಮಹಡಿಯಲ್ಲಿ ಯಕ್ಷಗಾನದ ಆಕರ್ಷಕ ಮುಖವಾಡಗಳು ಮತ್ತು ಭವ್ಯ ಕಿರೀಟಗಳ ಪ್ರದರ್ಶನ. ವಿಮಾನದಿಂದ ಇಳಿದು ಮಂಗಳೂರು ನಗರಕ್ಕೆ ಕಾಲಿಡುತ್ತಿದ್ದಂತೆಯೇ ತುಳುನಾಡಿನ ಶ್ರೀಮಂತ ಜಾನಪದ ಮತ್ತು ರಂಗಕಲೆಗಳ ಪರಿಚಯವನ್ನು ಉಣಬಡಿಸುವ ಮಂಗಳೂರು ವಿಮಾನ ನಿಲ್ದಾಣದ ಈ ಸಾಂಸ್ಕೃತಿಕ ಸ್ಪರ್ಶಕ್ಕೆ ದೇಶ-ವಿದೇಶಿ ಪ್ರಯಾಣಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.