ಆಳ್ವಾಸ್‌ನಲ್ಲಿ ಅಭಿನಯ ಸೂಕ್ಷ್ಮತೆಗಳ ಕಾರ್ಯಾಗಾರಕ್ಕೆ ಚಾಲನೆ

ಆಳ್ವಾಸ್‌ನಲ್ಲಿ ಅಭಿನಯ ಸೂಕ್ಷ್ಮತೆಗಳ ಕಾರ್ಯಾಗಾರಕ್ಕೆ ಚಾಲನೆ


ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ), ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಂಗಭೂಮಿ, ಸಿನಿಮಾ, ಧಾರಾವಾಹಿ, ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವವರಿಗಾಗಿ ಆಯೋಜಿಸಲಾದ ಎರಡು ದಿನಗಳ ಅಭಿನಯ ಸೂಕ್ಷ್ಮತೆಗಳ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಅಭಿನಯವು ಕೇವಲ ರಂಗಭೂಮಿ, ಸಿನಿಮಾಕ್ಕೆ ಸೀಮಿತವಾಗಿಲ್ಲ. ಶಿಕ್ಷಕರು, ವೃತ್ತಿಪರರು, ಆಡಳಿತಗಾರರು ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಪರಿಣಾಮಕಾರಿ ಅಭಿವ್ಯಕ್ತಿಗೆ ಅಭಿನಯದ ಕೌಶಲ್ಯ ಅಗತ್ಯ. ಪ್ರತಿಭೆಯ ಜೊತೆಗೆ ಪ್ಯಾಷನ್, ಸಂಪೂರ್ಣ ತೊಡಗಿಸಿಕೊಳ್ಳುವಿಕೆ, ಅಭಿರುಚಿಯೂ ಯಶಸ್ಸಿಗೆ ಮುಖ್ಯ ಎಂದರು.

ಕೇಂದ್ರದ ನಿರ್ದೇಶಕ ಡಾ. ಜೀವನ್‌ರಾಮ್ ಸುಳ್ಯ ಮಾರ್ಗದರ್ಶನದಲ್ಲಿ ಜುಲೈ ಎರಡು ದಿನ ನಡೆಯಲಿರುವ ಕಾರ್ಯಾಗಾರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಡಾ. ಜೀವನ್‌ರಾಮ್ ಸುಳ್ಯ ಅತ್ಯುತ್ತಮ ತರಬೇತುದಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ರಂಗಭೂಮಿ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ರಂಗಕಲೆಯನ್ನು ವ್ಯವಸ್ಥಿತವಾಗಿ ಕಲಿಯಲು ಪ್ರಾಯೋಗಿಕ ಅನುಭವ ಅತ್ಯಂತ ಪರಿಣಾಮಕಾರಿ ಎಂದರು.

ಡಾ. ಜೀವನ್‌ರಾಮ್ ಸುಳ್ಯ ಮಾತನಾಡಿ, ಅಭಿನಯವು ವೈಯಕ್ತಿಕ ಪ್ರದರ್ಶನವಲ್ಲ, ಸಮೂಹದೊಂದಿಗೆ ಬೆಳೆಯುವ ಕಲೆಯಾಗಿದೆ. ದೇಹಭಾಷೆ, ಧ್ವನಿ ನಿಯಂತ್ರಣ, ಭಾವಾಭಿವ್ಯಕ್ತಿ, ಪಾತ್ರ ವಿಶ್ಲೇಷಣೆ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಅಭಿನಯ ತರಬೇತಿ ಭಾಷಾ ಪ್ರೌಢಿಮೆ, ಅಭಿವ್ಯಕ್ತಿ, ಆತ್ಮವಿಶ್ವಾಸ, ಸಂವಹನ ಕೌಶಲ್ಯಗಳನ್ನು ವೃದ್ಧಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದಿವ್ಯಾ ಭಂಡಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article