ಹದಗೆಟ್ಟ ರಸ್ತೆ ದುರುಸ್ತಿ ಆಗ್ರಹಿಸಿ ಪ್ರತಿಭಟನೆ: ಮತದಾನ ಬಹಿಷ್ಕಾರ ಎಚ್ಚರಿಕೆ
ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಕಳೆದ ೫ ವರ್ಷಗಳಿಂದ ಸಂಪೂರ್ಣ ಹದಗೆಟ್ಟ ರೀತಿಯಲ್ಲಿದ್ದು ವರ್ಷದ ಹಿಂದೆಯೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳೀಯ ಜನಪ್ರತಿನಿಧಿಗಳು ದುರುಸ್ತಿ ಮಾಡುವ ಭರವಸೆ ನೀಡಿದ್ದರೂ ಇದುವರೆಗೂ ಭರವಸೆ ಈಡೇರಿಲ್ಲ. ರಸ್ತೆಯನ್ನು ದುರುಸ್ತಿ ಮಾಡುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿಗಳು ಯಾವುದೇ ಪ್ರಯೋಜನ ನೀಡಿಲ್ಲವೆಂದು ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಪ್ರತಿನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಡೆದಾಡುವ, ವಾಹನಗಳೂ ಸಂಚರಿಸುವ ಈ ರಸ್ತೆ ಯಲ್ಲಿ ಹೋಂಡ ಗುಂಡಿಗಳಿಂದ ಓಡಾಡಲೂ ಅಸಾಧ್ಯವಾಗಿದೆ. ರಸ್ತೆಯ ಹೊಂಡಗಳಿಗೆ ಬಿದ್ದು ಅನೇಕ ವಾಹನಗಳು ಅಪಘಾತವಾಗಿವೆ. ಸ್ಥಳೀಯರು ಕನಿಷ್ಠ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಾದರೂ ರಸ್ತೆಯನ್ನು ದುರುಸ್ತಿಮಾಡಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ದುರುಸ್ತಿಗೊಳಿಸದಿದ್ದಲ್ಲಿ ಮುಂದಿನ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವುದು ಅನಿವಾರ್ಯವಾಗಲಿದೆ ಎಂಬ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.