ಪೊಲೀಸರಿಂದ ಪೋಕ್ಸೊ ಆರೋಪಿ ಪರಾರಿ
ಉಳ್ಳಾಲ: ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಪೋಕ್ಸೊ ಪ್ರಕರಣದ ಆರೋಪಿ ಆಟೋ ಚಾಲಕನನ್ನು ಪೊಲೀಸರು ಆಟೋದಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಆರೋಪಿ ಹೊರಕ್ಕೆ ಜಿಗಿದು ಪರಾರಿಯಾದ ಘಟನೆ ನಡುಪದವು ಎಂಬಲ್ಲಿ ಸೋಮವಾರ ನಡೆದಿದೆ.
ಆರೋಪಿ ಆಟೋ ಚಾಲಕ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ತನ್ನ ಗುಪ್ತಾಂಗ ತೋರಿಸಿದ್ದು, ಆಕ್ರೋಶಗೊಂಡ ಬಾಲಕಿ ಕಡೆಯವರು ಆರೋಪಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದರೆನ್ನಲಾಗಿದೆ. ಕೊಣಾಜೆ ಪೊಲೀಸರಿಗೆ ವಿಚಾರ ತಿಳಿದು ರಿಕ್ಷಾ ಚಾಲಕನಾಗಿದ್ದ ಆರೋಪಿಯ ಮೊಬೈಲ್ ಟವರ್‌ನ ಟ್ರೇಸ್ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಆರೋಪಿಯನ್ನ ಕೊಣಾಜೆ ಪೊಲೀಸರಿಬ್ಬರು ಮುಡಿಪುವಿನಲ್ಲಿ ವಶಕ್ಕೆ ಪಡೆದು ಆತನ ಆಟೋ ರಿಕ್ಷಾದಲ್ಲೇ ಪೊಲೀಸ್ ಠಾಣೆಯ ಕಡೆ ಬಂದಿದ್ದಾರೆ. ನಡುಪದವು ತಲುಪುತ್ತಿದ್ದಂತೆ ಆರೋಪಿ ರಿಕ್ಷಾ ಚಾಲಕ ಚಾಲನೆಯಲ್ಲಿದ್ದ ಆಟೋ ರಿಕ್ಷಾದಿಂದ ಜಿಗಿದು ಪರಾರಿಯಾಗಿದ್ದಾನೆ. ಇಬ್ಬರು ಪೊಲೀಸರಿದ್ದ ಆಟೋ ರಿಕ್ಷಾ ಅದೃಷ್ಟವಶಾತ್ ರಸ್ತೆ ಬದಿಯ ಕಮರಿಗೆ ಬಿದ್ದು ನಿಂತಿದೆ.
ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು, ಪೊಲೀಸರು ಪರಾರಿಯಾದ ಆರೋಪಿಯ ಹುಡುಕಾಟ ನಡೆಸಿದ್ದರೆನ್ನಲಾಗಿದೆ. ಘಟನೆಯನ್ನ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಆಟೋ ರಿಕ್ಷಾದ ಫೋಟೊಗಳನ್ನ ಕ್ಲಿಕ್ಕಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಆರೋಪಿಯನ್ನ ಕರೆ ತರುತ್ತಿದ್ದ ಆಟೋ ರಿಕ್ಷಾವನ್ನು ಕೊಣಾಜೆ ಠಾಣೆಯ 102 ಪೊಲೀಸ್ ತುರ್ತು ವಾಹನವು ಹಿಂಬಾಲಿಸುತ್ತಿತ್ತೆಂದು ಹೇಳಲಾಗಿದೆ. ಪೊಲೀಸರ ಎಡವಟ್ಟಿನಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.