ಬಿ.ಸಿ. ರೋಡಿನಲ್ಲಿ ಐವರ ಮೇಲರಗಿದ ಬೀದಿನಾಯಿ
ಬಂಟ್ವಾಳ: ಬಿ.ಸಿ. ರೋಡಿನ ಕೈಕುಂಜೆ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಸಂಜೆಯವರೆಗೆ ಉನ್ಮತ್ತ ಬೀದಿನಾಯಿಯೊಂದು ಐವರ ಮೇಲೆರಗಿದೆ. ಇವರಲ್ಲಿ ಓರ್ವ ಮಹಿಳೆ ಮತ್ತು ಶಾಲೆಗೆ ಹೋಗುವ ಪುಟ್ಟ ಬಾಲಕಿ ಸೇರಿದ್ದಾರೆ. ನೂರಾರು ಜನರು ಸಂಚರಿಸುವ ಸರಕಾರಿ ಕಚೇರಿಗಳು ಹಾಗೂ ಜನವಸತಿ ಇರುವ ಪ್ರದೇಶದಲ್ಲಿ ದಿನವಿಡೀ ನಡೆದ ಈ ಘಟನೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಬೆಳಗ್ಗೆ ಸುಮಾರು 6 ಗಂಟೆಯಿಂದ ಸಂಜೆ ಸುಮಾರು 4.30ರ ಅವಧಿಯಲ್ಲಿ ಐದು ಮಂದಿಗೆ ಈ ನಾಯಿ ಕಚ್ಚಿದೆ. ಮೊದಲ ಘಟನೆ ಬೆಳಗ್ಗೆ ಸುಮಾರು 6 ಗಂಟೆಗೆ ನಡೆದಿದೆ. ಕೈಕುಂಜೆ ನಿವಾಸಿಯೊಬ್ಬರು ತನ್ನ ಮಗನನ್ನು ಸ್ಕೂಟರ್‌ನಲ್ಲಿ ಕೋಚಿಂಗ್‌ಗೆಂದು ಬಿಟ್ಟು ಮರಳುತ್ತಿದ್ದಾಗ ಮೆಸ್ಕಾಂ ಬಳಿ ಹೊಂಡವಿರುವ ಕಾರಣ ವಾಹನವನ್ನು ನಿಧಾನವಾಗಿ ಚಲಾಯಿಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ನಾಯಿಯೊಂದು ಅವರ ಮೇಲೆರಗಿ, ಕಾಲಿಗೆ ಕಚ್ಚಿದೆ. ಕೂಡಲೇ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಕೈಗೊಂಡಿದ್ದಾರೆ.
ಹಾಗೆಯೇ ವ್ಯಕ್ತಿಯೊಬ್ಬರು ಪಾರ್ಸೆಲ್ ಒಂದನ್ನು ಮೆಸ್ಕಾಂ ಬಳಿ ಇರುವ ಮನೆಯೊಂದಕ್ಕೆ ನೀಡಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದ ವೇಳೆ ಅಲ್ಲೇ ಇದ್ದ ನಾಯಿ ಕಚ್ಚಿದೆ. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ನಾಯಿ ಕಚ್ಚಿದೆ. ಸುಮಾರು ಮಧ್ಯಾಹ್ನದ ವೇಳೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಉನ್ಮತ್ತ ನಾಯಿಯೊಂದು ಮೇಲೆರಗಿದೆ. ಕಾಲಿಗೆ ಕಚ್ಚಿದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸಂಜೆ ಶಾಲೆ ಮುಗಿಸಿ ಮನೆಗೆ ತಾಯಿಯೊಂದಿಗೆ ಮರಳುತ್ತಿದ್ದ ಪುಟ್ಟ ಬಾಲಕಿಯೊಬ್ಬಳನ್ನು ಹಿಂಬಾಲಿಸಿ ಬಂದ ನಾಯಿ ಆಕೆಯ ಮೇಲೆರಗಿದೆ. ನಾಯಿ ಆಗಲೂ ತಪ್ಪಿಸಿಕೊಂಡಿದೆ.
ಬಿ.ಸಿ. ರೋಡಿನ ತಾಲೂಕು ಆಡಳಿತ ಸೌಧದಿಂದ ಕೈಕುಂಜಕ್ಕೆ ತೆರಳುವ ರಸ್ತೆಯಲ್ಲಿ ತೋಟಗಾರಿಕೆ, ಮೆಸ್ಕಾಂ, ಎಪಿಎಂಸಿ, ಶಿಶು ಅಭಿವೃದ್ಧಿ ಇಲಾಖೆ, ಅಂಗನವಾಡಿ, ಕ್ಷೇತ್ರ ಶಿಕ್ಞಣಾಧಿಕಾರಿಗಳ ಕಚೇರಿ ಇದೆ. ನೂರಾರು ಮನೆಗಳು ಇಲ್ಲಿವೆ. ಅನೇಕ ಮಂದಿ ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಬಹುತೇಕ ಬಿ.ಸಿ. ರೋಡಿನವರು ಈ ರಸ್ತೆಯಲ್ಲೇ ಬೆಳಗ್ಗೆ ವಾಕಿಂಗ್ ಕೂಡ ಮಾಡುತ್ತಾರೆ. ಇಲ್ಲಿ ಬೀದಿನಾಯಿಗಳು ಕೆಲವೊಮ್ಮೆ ಹಿಂಡುಹಿಂಡಾಗಿ ಕಾಣಸಿಗುತ್ತವೆ. ಇಲ್ಲಿ ನಿಲ್ಲಿಸಿದ ಹಲವು ವಾಹನಗಳ ಸೀಟ್ ಅನ್ನು ಹರಿದುಹಾಕಿದ ಉದಾಹರಣೆಗಳೂ ಇವೆ.