ನೀರಪಲ್ಕೆ ಕಲ್ಲಿನಕೋರೆಗೆ ದೌಡಾಯಿಸಿದ ಗಣಿ ಇಲಾಖಾಧಿಕಾರಿಗಳು: ಎಸ್‌ಸಿ-ಎಸ್‌ಟಿ ಸಭೆಯ ಬೆನ್ನಲ್ಲೇ ನಡೆದ ಬೆಳವಣಿಗೆ
ಬಂಟ್ವಾಳ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಿತ ತಹಶೀಲ್ದಾರ್, ಖುದ್ದು ಜಿಲ್ಲಾಧಿಕಾರಿಗಳಿಗೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ದೇವಸ್ಯಪಡೂರು ನೀರಪಲ್ಕೆ ಎಂಬಲ್ಲಿರುವ ಎಸ್‌ಸಿ ಕಾಲೋನಿಯ ಸಮೀಪ ನಡೆಯುತ್ತಿದೆಯೆನ್ನಲಾದ ಕಪ್ಪುಕಲ್ಲು ಕೋರೆಯಿಂದಾಗುವ ತೊಂದರೆಯ ಬಗ್ಗೆ ಸ್ಥಳೀಯ ದಲಿತ ಯುವಕರೋರ್ವರು ಎರಡು ದಿನಗಳ ಹಿಂದೆಯಷ್ಠೆ ಎಸ್‌ಸಿ-ಎಸ್‌ಟಿ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರ ಮುಂದೆ ಅಧಿಕಾರಿಗಳ ನಿರ್ಲಕ್ಷ್ಯತನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ನೀರಪಲ್ಕೆ ಎಂಬಲ್ಲಿರುವ ಎಸ್‌ಸಿ ಕಾಲೋನಿಯ ಪಕ್ಕದಲ್ಲೇ ಅಕ್ರಮವಾಗಿ ಕಪ್ಪುಕಲ್ಲಿನ ಕೋರೆಯ ಚಟುವಟಿಕೆ ನಡೆಯುತ್ತಿದ್ದು, ಪರಿಣಾಮವಾಗಿ ಎಸ್‌ಸಿ ಸಮುದಾಯದ ಹಲವಾರು ಮನೆಗಳಿಗೆ ಹಾನಿಯಾಗಿದೆ. ಬೋರ್ ವೆಲ್ ಬತ್ತಿಹೋಗಿದೆ. ರಸ್ತೆ ಡಾಮಾರುಕಿತ್ತು ಹೋಗಿದೆಯಲ್ಲದೆ ಕೃಷಿಗೂ ಹಾನಿಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಸತೀಶ್ ನೀರಪಲ್ಕೆ ಅವರು ಜಿಲ್ಲಾಧಿಕಾರಿ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಗಂಭೀರ ಆರೋಪಗೈದು ತನ್ನ ಅಸಮಾಧಾಮವನ್ನು ಹೊರಹಾಕಿದ್ದರು.
ಈ ಬಗ್ಗೆ ಲೋಕಾಯುಕ್ತರ ಸಹಿತ ಗಣಿ ಮತ್ರು ಭೂವಿಜ್ಞಾನ ಇಲಾಖೆ, ಬಂಟ್ವಾಳ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಯವರಿಗೂ ದೂರು ಸಲ್ಲಿಸಿದ್ದರೂ ಯಾವುದೇ ಸದಪಂದನ ಸಿಕ್ಕಿಲ್ಲ, ಕಲ್ಲಿನ ಕೋರೆಯಿಂದ ಏನಾದರೂ ಅನಾಹುತ ಸಂಭವಿಸಿದ ಮೇಲೆ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿರಾ ಎಂದು ಜಿಲ್ಲಾಧಿಕಾರಿಯವರ ಮುಂದೆ ಸತೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂದರ್ಭ ಜಿಲ್ಲಾಧಿಕಾರಿಯವರ ಸೂಚನೆಯಂತೆ ಸಂಬಂಧಿಸಿದ ದೂರನ್ನು ಸತೀಶ್ ಅವರು ಸಭೆಯಲ್ಲಿ ಜಿಲ್ಲಾಧಿಕಾರಿಯವರ ಕೈಗೆ ನೇರವಾಗಿ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಗಣಿ ಇಲಾಖೆಯ ಅಧಿಕಾರಿಗಳು ಗುರುವಾರ ದೇವಸ್ಯಪಡೂರಿನಲ್ಲಿ ನಡೆಯುತ್ತಿದೆಯೆನ್ನಲಾದ ಕಲ್ಲಿನ ಕೋರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕೋರೆ ನಿಯಾಮಾನುಸಾರವಾಗಿ ನಡೆಯುತ್ತಿದೆಯಾ, ಕೋರೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆಯ? ಎಂಬ ವಿಚಾರವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಿದ್ದಾರೆ.
ಈ ವೇಳೆ ಗಣಿ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಕೆಲವರು ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ.