ಬರಾಯಕೆರೆ ಕಲ್ಲುಗಣಿಗಾರಿಕೆ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ: ಪರಿಶೀಲನೆ
ಸ್ಥಳೀಯ ಭೂಮಾಲೀಕ ಹಾಗೂ ನ್ಯಾಯವಾದಿ ಶ್ರೀಕಾಂತ್ ಭಟ್ ಅವರು ಕೃಷಿ ಚಟುವಟಿಕೆಯ ಉದ್ದೇಶಕ್ಕಾಗಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಗಣಿಗಾರಿಕೆ ವೇಳೆ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಇದರಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.
ಸ್ಫೋಟ ಹಾಗೂ ಗಣಿಗಾರಿಕೆಯ ಪರಿಣಾಮವಾಗಿ ಸ್ಥಳೀಯರ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಲ್ಲು ಹಾಗೂ ಕಲ್ಲಿನ ಪುಡಿಯಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ಬೃಹತ್ ಗಾತ್ರದ ಲಾರಿಗಳ ನಿರಂತರ ಸಂಚಾರದಿಂದ ಗ್ರಾಮ ಪಂಚಾಯತ್ ರಸ್ತೆಗಳು ಹಾಗೂ ಮೋರಿಗಳು ಹಾನಿಗೊಳಗಾಗಿವೆ. ಅಲ್ಲದೆ, ಐತಿಹಾಸಿಕ ಬರಾಯಕೆರೆ ಕಲುಷಿತಗೊಂಡಿದ್ದು, ಅದರ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕರ ಅಹವಾಲು ಆಲಿಸಿದ ತಹಶೀಲ್ದಾರ್ ಎನ್.ಎಸ್. ನರಗುಂದ ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಅಳದಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪೂವಪ್ಪ ಮಲೆಕುಡಿಯ ಹಾಗೂ ಪಿಲ್ಯ ಗ್ರಾಮ ಆಡಳಿತಾಧಿಕಾರಿ ಭಾರತಿ ಉಪಸ್ಥಿತರಿದ್ದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಶಾಂತ್ ವೇಗಸ್, ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಲಿಯೋ ಪಿರೇರಾ, ಹರೀಶ್ ಪೂಜಾರಿ, ಗಣೇಶ್ ದೇವಾಡಿಗ, ಮೇಲ್ವಿನ್ ಡಿಸೋಜ, ಪ್ರವೀಣ್ ನಿನ್ನಿಕಲ್ಲು, ಜೋನ್ ಡಿಸೋಜ, ದಿನೇಶ್ ಪೂಜಾರಿ, ಪ್ರಶಾಂತ್ ಪೂಜಾರಿ ಕೂಸ ಅಳದಂಗಡಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.