ಕಳಪೆ ಆಹಾರ ನೀಡುವ ಹೋಟೆಲ್‌ಗಳ ವಿರುದ್ಧ ಕ್ರಮ: ಸಚಿವ ಯು.ಟಿ. ಖಾದರ್
ಕಾರ್ಕಳ: ಗ್ರಾಹಕರಿಗೆ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ನೀಡುವುದು ಹೋಟೆಲ್‌ಗಳ ಜವಾಬ್ದಾರಿಯಾಗಿದ್ದು, ಕಳಪೆ ಅಥವಾ ಆರೋಗ್ಯಕ್ಕೆ ಹಾನಿಕರ ಆಹಾರ ನೀಡುವ ಹೋಟೆಲ್‌ಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಪಬ್ ಹಾಗೂ ಹೋಟೆಲ್‌ಗಳ ಮೇಲೆ ನಡೆಯುತ್ತಿರುವ ಪರಿಶೀಲನೆ ಮತ್ತು ಆಹಾರ ಸುರಕ್ಷತಾ ಇಲಾಖೆ ಕಾರ್ಯಾಚರಣೆ ಕುರಿತು ಕಾರ್ಕಳದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಹೋಟೆಲ್‌ಗಳ ತಪಾಸಣೆ ಮುಂದುವರಿಯಲಿದೆ ಎಂದರು.
ಹಣ ಪಾವತಿಸಿ ಆಹಾರ ಸೇವಿಸುವ ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುವುದು ಹೋಟೆಲ್‌ಗಳ ಕರ್ತವ್ಯ. ಹಣ ಪಡೆದು ಕಳಪೆ ಆಹಾರ ನೀಡುವುದು ಸರಿಯಲ್ಲ. ಆಹಾರ ಸೇವಿಸಿ ಜನರು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ರುಚಿಯೊಂದೇ ಮುಖ್ಯವಲ್ಲ, ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಹಾರ ಪದ್ಧತಿಯಿಂದಲೂ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಆಹಾರದ ಗುಣಮಟ್ಟದ ಬಗ್ಗೆ ಜಾಗೃತರಾಗಬೇಕು ಎಂದರು.
ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಸೇರಿದಂತೆ ಆರೋಗ್ಯಕ್ಕೆ ಹಾನಿಕರ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಆಹಾರ ಸುರಕ್ಷತಾ ಇಲಾಖೆಯ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ರಾಜ್ಯದ ಎಲ್ಲೆಡೆ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.