ತೆಕ್ಕಟ್ಟೆಯಲ್ಲಿ ಅಗ್ನಿ ದುರಂತ: ಸಾಮಗ್ರಿಗಳ ಸಹಿತ ಅಂಗಡಿ ಬೆಂಕಿಗಾಹುತಿ
ಕುಂದಾಪುರ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಶ್ರೀ ಬ್ರಹ್ಮಸ್ಥಾನ ದೇವಸ್ಥಾನದ ಸಮೀಪದ ಗುರು ಬ್ರಹ್ಮ ಜನರಲ್ ಸ್ಟೋರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಪೂರ್ಣ ಅಂಗಡಿ ಬೆಂಕಿಗಾಹುತಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ತಡರಾತ್ರಿ ಘಟನೆ ನಡೆದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಂಗಡಿ ಮಾಲೀಕರಾದ ಸಂತೋಷ್ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳಿದ ಬಳಿಕ ಮಧ್ಯರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳು, ಫ್ರಿಡ್ಜ್ ಹಾಗೂ ಪೀಠೋಪಕರಣಗಳು ಭಸ್ಮವಾಗಿವೆ.
ಈ ದುರ್ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಅಂಗಡಿಯಲ್ಲಿದ್ದ ಫ್ರಿಡ್ಜ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸಂಶಯಿಸಲಾಗಿದೆ. ಈ ಅಗ್ನಿ ಅವಘಡದಿಂದ ಸುಮಾರು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್, ಸಹಾಯಕ ಠಾಣಾಧಿಕಾರಿ ಕಾಜಾ ಹುಸೇನ್, ಪ್ರಮುಖ ಅಗ್ನಿಶಾಮಕ ಸತೀಶ್ ಶೆಣೈ, ಚಾಲಕ ಬಸವರಾಜ, ಅಗ್ನಿಶಾಮಕರಾದ ಅಭಿಷೇಕ್, ರಿಯಾಝ್ ಪಾಟೀಲ್ ಕಾರ್ಯಾಚರಣೆಯಲ್ಲಿದ್ದರು.