ಆ.10ರಂದು ‘ತ್ರಿಶಾ ದಿನ ಆಚರಣೆ’ ಕಾರ್ಯಕ್ರಮ
Friday, August 7, 2026
ಮಂಗಳೂರು: ಸಿದ್ಧಾಂತ ಫೌಂಡೇಶನ್ ವತಿಯಿಂದ ತ್ರಿಶಾ ಶಿಕ್ಷಣ ಸಂಸ್ಥೆಗಳ ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಶ್ರೇಷ್ಠತೆಯಲ್ಲಿ 28 ವರ್ಷಗಳ ಸಮರ್ಪಿತ ಸೇವೆಯನ್ನು ಸ್ಮರಿಸುವ ಸಲುವಾಗಿ ‘ತ್ರಿಶಾ ದಿನ ಆಚರಣೆ’ ಕಾರ್ಯಕ್ರಮ ಆ.10ರಂದು ಬೆಳಗ್ಗೆ 9ರಿಂದ ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ತ್ರಿಶಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ, ವೈದ್ಯಕೀಯ, ನೃತ್ಯ, ನಾಟಕ, ವಾಣಿಜ್ಯ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ವೇಳೆ ಸನ್ಮಾನಿಸಲಾಗುವುದು. ತ್ರಿಶಾ ಸಂಸ್ಥೆಗಳು ಮಂಗಳೂರಿನಲ್ಲಿ ಮಾತ್ರವಲ್ಲದೆ, ಬೆಂಗಳೂರು, ಉಡುಪಿ, ಶಿವಮೊಗ್ಗದಲ್ಲೂ ಕರ್ಯಾಚರಿಸುತ್ತಿವೆ ಎಂದು ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ ಕಾಯರ್‌ಕಟ್ಟೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತ್ರಿಶಾ ಕಾಲೇಜು ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಮಾತನಾಡಿ, ಸಾಧಕರಾದ ಡಾ. ಮಧುಸೂದನ್ ಲಾಡ್, ಡಾ. ದೇವರಾಜ್ ಕೆ., ಶ್ರೀಮಾ ಪ್ರಿಯದರ್ಶಿನಿ, ಮೈತ್ರೇಯ, ವಿಕ್ರಮ್ ದತ್ತ, ರಾಕೇಶ್ ರೈ ಅಡ್ಕ, ಸಿಎ ಶಾಂತಾರಾಮ ಶೆಟ್ಟಿ, ರೂಪಶ್ರೀ ವರ್ಕಾಡಿ ಹಾಗೂ ಮಾರುತಿ ಜನ ಸೇವಾ ಸಂಘದ ಮುಖ್ಯಸ್ಥರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ ಕಾಲೇಜು ಪ್ರಾಂಶುಪಾಲೆ ಪ್ರೊ. ಸುಪ್ರಭಾ, ಮಾಧ್ಯಮ ಸಂಚಾಲಕ ಪ್ರಭಾಕರ್ ಕೊಠಾರಿ ಉಪಸ್ಥಿತರಿದ್ದರು.