ಬೆಂ-ಮಂ. ವಂದೇ ಭಾರತ್ ರೈಲು: ಆ.11ರಿಂದ ಪ್ರಾಯೋಗಿಕ ಸಂಚಾರ
ಮಂಗಳೂರು: ಬೆಂಗಳೂರು ಹಾಗೂ ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಾಲನೆಗೆ ವೇದಿಕೆ ಸಜ್ಜಾಗಿದ್ದು, ನೈಋತ್ಯ ರೈಲ್ವೇಯ ಮೈಸೂರು ವಿಭಾಗವು ಆ. 11ರಿಂದ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಸಲು ತಯಾರಿ ನಡೆಸುತ್ತಿದೆ.
ಜೂನ್ ತಿಂಗಳಿನೊಳಗಾಗಿ ವಂದೇ ಭಾರತ್ ಎಕ್ಸ್‌ಪ್ರಸ್ ಪರಿಚಯಿಸಲಾಗುವುದು ಎಂದು ರೈಲ್ವೇ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಈ ಹಿಂದೆ ಘೋಷಿಸಿದ್ದರಾದರೂ ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ ಹೊಂದಿದ ವಂದೇ ಭಾರತ್ ರೇಕ್ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಈಗ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಇಬಿ ವ್ಯವಸ್ಥೆ ಹೊಂದಿರುವ 20-ಕೋಚ್‌ಗಳ ವಂದೇ ಭಾರತ್ ರೇಕ್ ಅನ್ನು ಮೈಸೂರು ವಿಭಾಗಕ್ಕೆ ಪೂರೈಸಿರುವುದರಿಂದ, ಪ್ರಾಯೋಗಿಕ ಸಂಚಾರ ಹಾಗೂ ಅನಂತರದ ವಾಣಿಜ್ಯ ಸಂಚಾರದ ಅನುಮತಿಗೆ ಹಾದಿ ಸುಗಮವಾಗಿದೆ. ಈ ರೇಕ್ ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
ಪ್ರಾಯೋಗಿಕ ಸಂಚಾರ ಆ. 11ರಿಂದ 20ರ ವರೆಗೆ ನಡೆಯಲಿದೆ. ಇದಕ್ಕಾಗಿ ಭಾರತೀಯ ರೈಲ್ವೇಯ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ತಂಡವು ಶೀಘ್ರದಲ್ಲೇ ಆಗಮಿಸಲಿದೆ ಎಂದು ವಿಭಾಗೀಯ ರೈಲ್ವೇ ವ್ಯವಸ್ಥಾಪಕರು ತಿಳಿಸಿದ್ದಾರೆ.