ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’: 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆಫರ್, 6183 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ

ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’: 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆಫರ್, 6183 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ


ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ ಯಲ್ಲಿ 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್ ದೊರಕಿದೆ. 6183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಪ್ರಗತಿ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, 332 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಭಾಗವಹಿಸಿದ್ದರು ಎಂದರು. 

ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ವೆಬ್‌ಸೈಟ್ (www.alvaspragati.com )ನಲ್ಲಿ ಪ್ರಕಟಿಸಲಾಗಿದೆ. ಉಳಿದ ಕಂಪನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಉದ್ಯೋಗ ಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸೆಸೆಲ್ಸಿ, ಪಿಯುಸಿಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತದೆ ಎಂದು ಅವರು ತಿಳಿಸಿದರು. 

ಈ ಬಾರಿ ಉತ್ಪಾದನಾ ವಲಯದಲ್ಲಿ ೭೫ ಕಂಪನಿಗಳು ಭಾಗವಹಿಸಿ 924 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡು 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಲ್ಲಿ ಬಹುತೇಕರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಎಚ್ ಎಲ್ ಮಾಂಡೊ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿದೆ. 

ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್ ಅಭ್ಯರ್ಥಿಯೊಬ್ಬರನ್ನು ಶಾರ್ಟ್ಲಿಸ್ಟ್ ಮಾಡಿದೆ. ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು 30 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಶಾರ್ಟ್ಲಿಸ್ಟ್ ಗೊಂಡಿದ್ದರೆ, 96 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದೆ. ವುಡ್ರಾಕ್ ಇನ್ಫೋಟೆಕ್ ಕಂಪೆನಿಯು 17 ಜನರನ್ನು ಶಾರ್ಟ್‌ಲಿಸ್ಟ್‌ಗೊಳಿಸಿದೆ  ಪ್ರೋಟಾಕ್ ಸೊಲ್ಯೂಷನ್ಸ್ ಚೆನ್ನೈಯಲ್ಲಿ ಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ ಒರ್ವ ಅಭ್ಯರ್ಥಿಗೆ ಉದ್ಯೋಗ ಒದಗಿಸಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 913 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ಗೊಳಿಸಲಾಗಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರಕಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪೆನಿಯಾದ ಇಎಕ್ಸ್‌ಎಲ್ ಸರ್ವಿಸಸ್ ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಅಕೌಂಟ್ಸ್ ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಔಷಧೀಯ ಕ್ಷೇತ್ರದಲ್ಲಿ ಯೂರೋಫಿನ್ಸ್, ಆರ್.ಎಲ್. ಫೈನ್ ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ 159 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಆರೋಗ್ಯ ಕ್ಷೇತ್ರದಲ್ಲಿ ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮಿಟ್ ರೆಸಾರ್ಟ್ ಸಂಸ್ಥೆಯು ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್ನೆಸ್ ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ. 

ತಾಲೂಕು ಮಟ್ಟದ ಘಟಕಗಳ ಸ್ಥಾಪನೆ..

ಅಭ್ಯರ್ಥಿಗಳಿಗೆ ಗರಿಷ್ಠ ಉದ್ಯೋಗಾವಕಾಶ ದೊರೆಯುವಂತೆ ಮಾಡಲು ವಿವಿಧ ವಲಯಗಳ ಸಂಯೋಜಕರು ನೇಮಕಾತಿ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ನೇಮಕಾತಿಯ ಮುಂದಿನ ಹಂತಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಿರಂತರ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಭ್ಯರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಅವರ ಉದ್ಯೋಗ ಅಗತ್ಯಗಳನ್ನು ಅರ್ಥಮಾಡಿಕೊಂಡು ಸೂಕ್ತ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ ಎಂದು ವಿವೇಕ್ ಆಳ್ವ ತಿಳಿಸಿದರು. 

ಉದ್ಯೋಗದ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿಯನ್ನು ನೀಡುವ ಮತ್ತು ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಆಳ್ವಾಸ್ ಪ್ರಗತಿ ವತಿಯಿಂದ ಓರಿಯೆಂಟೇಶನ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದೆ ಈ ಕಾರ್ಯವನ್ನು ಉದ್ಯೋಗ ಮೇಳದ ನಾಲ್ಕೈದು ತಿಂಗಳು ಮುಂಚಿತವಾಗಿ ವಿವಿಧ ಜಿಲ್ಲೆಯ ತಾಲೂಕು ಮಟ್ಟದಲ್ಲಿ ನುಡಿಸಿರಿಯ ಸಂಯೋಜಕರ ಸಹಕಾರವನ್ನು ಪಡೆದು ನಡೆಸಲು ನಿರ್ಧರಿಸಲಾಗಿದೆ ಎಂದರು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಪ್ರಗತಿ-2026 ಉತ್ಪಾದನಾ ವಲಯ ಮುಖ್ಯಸ್ಥ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ದಿಶಾ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article