ಸಮುದಾಯ-50 ಸಮಾರೋಪ ಕಾರ್ಯಕ್ರಮಕ್ಕೆ ಸಂಘಪರಿವಾರ ಅಡ್ಡಿ: ಸಮುದಾಯ ಕರ್ನಾಟಕ ಮತ್ತು ಸಾಹಿತಿ ಕಲಾವಿದರ ಖಂಡನೆ

ಸಮುದಾಯ-50 ಸಮಾರೋಪ ಕಾರ್ಯಕ್ರಮಕ್ಕೆ ಸಂಘಪರಿವಾರ ಅಡ್ಡಿ: ಸಮುದಾಯ ಕರ್ನಾಟಕ ಮತ್ತು ಸಾಹಿತಿ ಕಲಾವಿದರ ಖಂಡನೆ

ಮಂಗಳೂರು: ಸಮುದಾಯವು ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ತೆರೆನಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇದರ ಸಮಾರೋಪ ಕಾರ್ಯಕ್ರಮವು ಧಾರವಾಡದ ನೆಲದಲ್ಲಿ ಚಿತ್ರಕಲಾ ಶಿಬಿರ, ಶರಣರ ವಚನಗಳ ನಿಜ ದರ್ಶನ ಮತ್ತು ಯುವ ಜನತೆಯ ಮಂದಿರುವ ಸವಾಲುಗಳ ವಿಷಯವಾಗಿ ವಿಚಾರ ಸಂಕಿರಣ ಜೊತೆಗೆ ನಾಟಕಗಳನ್ನು ನಡೆಸುವ ಮೂಲಕ ಸಮಾರೋಪವನ್ನು ಹಮ್ಮಿಕೊಂಡಿತ್ತು. 

ಈ ನಾಡಿನ ಸಾಹಿತಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯಾಗಿ ಕಳೆದ ಐವತ್ತು ವರ್ಷಗಳಿಂದ ನಿರಂತರ ಚಳುವಳಿಗಳನ್ನು ರೂಪಿಸುತ್ತಾ ಬಂದಿದ್ದು ಈ ಚಳುವಳಿಯ ನೆನಪಿನ ಭಾಗವಾಗಿ ನಡೆದ ಸಮಾರೋಪ ಸಮಾರಂಭದಲ್ಲಿ ನಾಡಿನ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಚ್ ಎನ್ ನಾಗಮೋಹನ್ ದಾಸ್ ರವರು ಮತ್ತು ಚಿತ್ರನಟರಾದ ಪ್ರಕಾಶ್ ರಾಜ್ ಭಾಗವಹಿಸಿದ್ದರು. 

ಪ್ರಕಾಶ್ ರಾಜ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಗುಂಪೊಂದು ಸಭಾಂಗಣದ ಎದುರು ಪ್ರತಿಭಟನೆಗೆ ಮುಂದಾಗಿತ್ತು. ಪ್ರಕಾಶ್ ರಾಜ್ ಗೋ ಬ್ಯಾಕ್ ಘೋಷಣೆಗಳು ಕೇಳಿ ಬಂದಾಗ ಸಮುದಾಯವು ಪೊಲೀಸ್ ಅಧಿಕಾರಿಗಳೊಂದಿಗೆ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸದಂತೆ ಕ್ರಮ ಕೖಗೊಳ್ಳಿ ಎಂದು ವಿನಂತಿಸಿ ಕಾರ್ಯಕ್ರಮವು ಮುಂದುವರೆಯಿತು.  ದಾಳಿ ಕೋರ ಗುಂಪೊಂದು ದಾಂದಲೆ ಎಬ್ಬಿಸುವ ನೆವದಲ್ಲಿ ಸಭಾಂಗಣದ ಒಳನುಗ್ಗಿತು. ಕಾರ್ಯಕ್ರಮ ಮುಗಿದ ನಂತರ ಸಭಾಂಗಣದ ಎದುರಿನ ಬ್ಯಾನರ್ ಗಳನ್ನು ಹರಿದು ಹಾಕಿ ತನ್ನ ಪ್ಯಾಸಿಸ್ಟ್ ಪ್ರವೃತ್ತಿಯನ್ನು ಮೆರೆಯಿತು.

ಸಮುದಾಯ ಒಂದು ಸಾಂಸ್ಕೃತಿಕ ಚಳುವಳಿ. ಕರ್ನಾಟಕದ ಸಾಹಿತಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಮುದಾಯದ ಅಪಾರ ಕೊಡುಗೆ ಇದೆ. ಕನ್ನಡ ರಂಗಭೂಮಿಯನ್ನು ಬೆಳೆಸುವ ಮತ್ತು ರಾಜ್ಯದಾದ್ಯಂತ ವಿಸ್ತರಿಸುವ ಕೆಲಸವನ್ನು ಕಳೆದ 50 ವರ್ಷಗಳಿಂದ ನಡೆಸುತ್ತಾ ಬಂದಿದೆ.ರಂಗಭೂಮಿಗೆ ಅನೇಕ ಕಲಾವಿದರನ್ನೂ, ನಿರ್ದೇಶಕರನ್ನೂ ಒದಗಿಸಿದ ಸಮುದಾಯ ಕನ್ನಡ ಮಣ್ಣಿನ ಜೀವ ಪರಧ್ವನಿಯಾಗಿ ಸಮಾಜದ ದುರ್ಬಲ ವರ್ಗದ ಜೊತೆ ನಿಂತು ಅವರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದೆ. 

ಅಭಿವೖಕ್ತಿ ಸ್ವಾತಂತ್ರ್ಯ ದ ಹರಣದ ವಿರುದ್ದ ಹುಟ್ಟಿಕೊಂಡ ಈ ಜನ ಚಳುವಳಿಯು ಅನ್ಯಾಯ ಅಸಮಾನತೆಯ ವಿರುದ್ಧ ತನ್ನ ಅಭಿವೖಕ್ತಿಯನ್ನು ಪ್ರದರ್ಶಿಸಿದೆ. ಯುದ್ಧ ಬೀತಿಯ ಕಾಲಕ್ಕೆ ಅಣುಸಮರದ ವಿರುದ್ಧ ನೂರು ಅಡಿಗಳ ಬಣ್ಣದ ನಡೆ, ಅಸ್ಪೃಶ್ಯತೆ, ನಿರುದ್ಯೋಗ, ಕೋಮುವಾದ ಮತ್ತು ಬರಗಾಲದ ದಾರುಣತೆಯ ಸಂದರ್ಭದಲ್ಲಿ ರೖತರ ಜೊತೆ ನಿಂತು ಜಾಥಾಗಳನ್ನು ರೂಪಿಸಿ ಸರಕಾರಗಳನ್ನು ಜಾಗೃತಗೊಳಿಸಿದೆ.

ಸಮುದಾಯವು ಈ ನಾಡಿನ ಸಾಂಸ್ಕೃತಿಕ ಮತ್ತು ಸಾಹಿತಿಕ ಪ್ರಜ್ಞೆಯಾಗಿದ್ದು ಇಂತಹ ಜನ ಚಳುವಳಿಗೆ ಶರಣರ ನಾಡಿನಲ್ಲಿ  ಅಭಿವ್ಯಕ್ತಿಯ ವಿರುದ್ಧ ನಡೆಸಿದ ದಾಳಿ ಖಂಡನೀಯ. ಜೊತೆಗೆ ಪೊಲೀಸ್ ವ್ಯವಸ್ಥೆಯು ಕೂಡ ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿ ಈ ದಾಳಿಗೆ ಪೂರಕವಾಗುವಂತೆ ವರ್ತಿಸಿದೆ. ಧಾರವಾಡದ ಶಾಸಕರಾದ ಅರವಿಂದ ಬೆಲ್ಲದ್ ರವರು ದಾಳಿಗೆ ಮುಂದಾದ ಕಿಡಿಗೇಡಿಗಳ ಪರವಾಗಿ ಪೊಲೀಸ್ ಠಾಣೆಗೆ ಪ್ರವೇಶಿಸಿ ಸಮುದಾಯದ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪೊಲೀಸರಿಗೆ ಆವಾಜ್ ಹಾಕಿದ್ದು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯು ರಾಷ್ಟ್ರ ವಿರೋಧಿ ಷೋಷಣೆ ಎಂದು ಹೇಳಿಕೆ ನೀಡಿರುವು ಖಂಡನೀಯ. ಇಂತಹ ಪ್ರಜಾಪ್ರಭುತ್ವ ವಿರೋಧಿ ದಾಳಿಯನ್ನು ಸಮುದಾಯವು ಖಂಡಿಸುತ್ತಿದ್ದು ದಾಳಿಗೆ ಮುಂದಾದ ಕಿಡಿಗೇಡಿಗಳನ್ನು ಮತ್ತು ಈ ದಾಳಿಗೆ ಪ್ರೇರೇಪಣೆ ನಿಡಿದವರನ್ನು ಗುರುತಿಸಿ  ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಸಮುದಾಯ ಕರ್ನಾಟಕವು ಒತ್ತಾಯಿಸುತ್ತದೆ.

ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರು ಸಮುದಾಯ ಮಂಗಳೂರು ಅಧ್ಯಕ್ಷರಾದ ದಯಾನಂದ ಶೆಟ್ಟಿ,ಖಜಾಂಚಿ ಯೋಗೀಶ್ ಜಪ್ಪಿನ ಮೊಗರು, ರಂಗಕರ್ಮಿ ಐ ಕೆ ಬೊಳುವಾರು, ವಿದ್ದು ಉಚ್ಚಿಲ್, ಸಮುದಾಯದ ಹಿರಿಯ ಮುಖಂಡರಾದ ವಾಸುದೇವ ಉಚ್ಚಿಲ,ಪ್ರಗತಿಪರ ಚಿಂತಕರಾದ ಡಾ. ಕೃಷ್ಣಪ್ಪ ಕೊಂಚಾಡಿ,ನಿವೃತ್ತ ಪ್ರಾಧ್ಯಾಪಕರು ಮತ್ತು ವೖಚಾರಿಕ ಚಿಂತಕರಾದ ರಾಜೇಂದ್ರ ಉಡುಪ, ರಂಗ ಕಲಾವಿದರಾದ ಶ್ಯಾಮ್ ಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ಹಿರಿಯ ನ್ಯಾಯವಾದಿಗಳಾದ ಯಶವಂತ ಮರೋಳಿ ಮೊದಲಾದವರು ಖಂಡನೆ ವ್ಯಕ್ತಪಡಿಸಿದರು ಎಂದು ಸಮುದಾಯ ಕರ್ನಾಟಕದ ಕಾರ್ಯದರ್ಶಿ ಮನೋಜ್ ವಾಮಂಜೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article