ದ.ಕ. ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಸತತ 9ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನಾ ಪ್ರಶಸ್ತಿ
ಸಹಕಾರಿ ನೌಕರ ಸದಸ್ಯರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ಒದಗಿಸುತ್ತಿರುವ ಸಂಘವು ಕಳೆದ 32 ವರ್ಷಗಳಿಂದ ಸದಸ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುತ್ತಾ, ಸದೃಢವಾಗಿ ಬೆಳೆದುಬಂದಿದೆ. ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನಲ್ಲಿ ಮೂರು ಅಂತಸ್ತಿನ ಸ್ವಂತ ಕಟ್ಟಡವನ್ನು ಹೊಂದಿರುವ ಸಂಘವು ನಿರಂತರ ಲಾಭ ಗಳಿಕೆಯೊಂದಿಗೆ ಸಹಕಾರಿ ನೌಕರರ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ.
ಸಂಘದ ನಿರಂತರ ಕಾರ್ಯಸಾಧನೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ನೀಡುವ ‘ಸಾಧನಾ ಪ್ರಶಸ್ತಿ’ಯನ್ನು ಸಂಘವು 2017-18ನೇ ಸಾಲಿನಿಂದ ಸತತವಾಗಿ ಪಡೆಯುತ್ತಿದೆ. 2017-18ರಿಂದ 2024-೨25ನೇ ಸಾಲಿನವರೆಗೆ ಸತತ ಎಂಟು ಬಾರಿ ಪ್ರಶಸ್ತಿ ಪಡೆದಿದ್ದ ಸಂಘವು ಇದೀಗ 2025-26ನೇ ಸಾಲಿನಲ್ಲೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಸತತ 9ನೇ ಬಾರಿಗೆ ಸಾಧನಾ ಪ್ರಶಸ್ತಿಗೆ ಭಾಜನವಾಗಿದೆ.
ಶನಿವಾರ ನಡೆದ ಎಸ್‌ಸಿಡಿಸಿಸಿ ಬ್ಯಾಂಕಿನ 112ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಅವರಿಗೆ ಪ್ರದಾನ ಮಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ. ಜಯರಾಮ ರೈ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ ಹಾಗೂ ಕುಶಾಲಪ್ಪ ಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉಭಯ ಜಿಲ್ಲೆಗಳ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್. ಹಾಗೂ ಲಾವಣ್ಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ರಾಘವ ಆರ್. ಉಚ್ಚಿಲ್, ನಿರ್ದೇಶಕರಾದ ಜಯಪ್ರಕಾಶ್ ರೈ, ನಿಶಿತ ಜಯರಾಮ್ , ಕಿರಣ್ ಕುಮಾರ್ ಶೆಟ್ಟಿ , ಪ್ರೇಮ್ ರಾಜ್ ಭಂಡಾರಿ ಉಪಸ್ಥಿತರಿದ್ದರು.