ಮಂಗಳೂರು ಅಭಿವೃದ್ಧಿಗೆ ‘ಮಾಸ್ಟರ್ ಪ್ಲಾನ್’: ಸಂತೋಷ್ ಕುಮಾರ್ ಶೆಟ್ಟಿ
‘ಮಾಸ್ಟರ್ ಪ್ಲಾನ್’..
ಈ ಸಂದರ್ಭ ಮಾತನಾಡಿದ ಅವರು, ಮಂಗಳೂರು ನಗರದ ಯೋಜನಾಬದ್ಧ ಪ್ರಗತಿಗೆ ‘ಮಾಸ್ಟರ್ ಪ್ಲಾನ್’ ಜಾರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಈಗಾಗಲೇ ಜನವರಿ ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ ಕೇಳಿದ್ದ ಸ್ಪಷ್ಟೀಕರಣಗಳನ್ನೂ ನೀಡಲಾಗಿದೆ. ಇದರಲ್ಲಿರುವ ಸಣ್ಣಪುಟ್ಟ ತೊಡಕುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಶೀಘ್ರವೇ ಸರ್ಕಾರದ ಅಂತಿಮ ಅನುಮೋದನೆ ಪಡೆದು ಜಾರಿಗೆ ತರಲಾಗುವುದು ಎಂದರು.
ಮೂಡ ವ್ಯಾಪ್ತಿಯ ವಿವಿಧ ಬಡಾವಣೆಗಳ (ಲೇಔಟ್‌ಗಳ) ನಿವೇಶನ ಹಂಚಿಕೆ ಹಾಗೂ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಸಂತೋಷ್ ಶೆಟ್ಟಿ, ಕುಂಜತ್ತಬೈಲ್ ಲೇಔಟ್ ಒಟ್ಟು 18 ಎಕರೆ ಪ್ರದೇಶದಲ್ಲಿದ್ದು, ಸುಮಾರು 200 ನಿವೇಶನಗಳಿವೆ. ಇದರಲ್ಲಿ ಈಗಾಗಲೇ 35 ನಿವೇಶನಗಳ ಹಂಚಿಕೆಯಾಗಿದ್ದು, ಉಳಿದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಣಾಜೆ ಲೇಔಟ್ 13.5 ಎಕರೆ ಪ್ರದೇಶದಲ್ಲಿದ್ದು, 142 ನಿವೇಶನಗಳಿವೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರವೇ ಕೆಲಸ ಮುಂದುವರಿಸಲಾಗುವುದು. ಚೇಳ್ಯಾರು ಲೇಔಟ್ ೪೫ ಎಕರೆ ಪ್ರದೇಶದಲ್ಲಿ ಸುಮಾರು 700 ನಿವೇಶನಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ದರ ಹೆಚ್ಚಳದ ಕುರಿತು ಉಂಟಾಗಿದ್ದ ಗೊಂದಲವನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಕೆರೆಗಳ ಪುನಶ್ಚೇತನ..
ಮೂಡ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಗಳಿಗೆ ವೇಗ ನೀಡಲಾಗುವುದು. ಕದ್ರಿ ಪಾರ್ಕ್‌ನಂತೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ನಗರದಲ್ಲಿ ಜಾಗದ ಅಭಾವವಿದೆ. ಆದ್ದರಿಂದ ವಸತಿ ಪ್ರದೇಶಗಳಲ್ಲಿ ಲಭ್ಯವಿರುವ 25 ಸೆಂಟ್ಸ್, 50 ಸೆಂಟ್ಸ್ ಹಾಗೂ ಖಾಸಗಿ ಜಾಗಗಳನ್ನು ಪಡೆದುಕೊಂಡು ಸಣ್ಣ ಸಣ್ಣ ಸುಂದರ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ನಿರ್ಗಮನ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮೂಡ ಆಯುಕ್ತ ಮೊಹಮ್ಮದ್ ನಝೀರ್ ನೀರಜ್ ಪಾಲ್, ಚಿತ್ತರಂಜನ್ ಶೆಟ್ಟಿ, ಡಿ. ಕೆ. ಅಶೋಕ್ ಉಪಸ್ಥಿತರಿದ್ದರು.