ನಿರುದ್ಯೋಗ, ಹಸಿವು, ಬಡತನವೇ ಮೋದಿ ಸರಕಾರದ ಸಾಧನೆ: ನವೀನ್ ಕುಮಾರ್

ನಿರುದ್ಯೋಗ, ಹಸಿವು, ಬಡತನವೇ ಮೋದಿ ಸರಕಾರದ ಸಾಧನೆ: ನವೀನ್ ಕುಮಾರ್


ಮಂಗಳೂರು: ವಿದ್ಯಾರ್ಥಿ ಯುವಜನರ ಉದ್ಯೋಗ ಮತ್ತು ಶಿಕ್ಷಣದ ಬೇಡಿಕೆಗಳನ್ನು ಕಡೆಗಣಿಸುವ ಯಾವ ಸರಕಾರವು ಉಳಿಯಲು ಸಾಧ್ಯವಿಲ್ಲ. ಮೋದಿ ಸರಕಾರ ಕಟ್ಟಿರುವ ಸುಳ್ಳು ಮತ್ತು ಭ್ರಮೆಗಳ ಗೋಪುರ ಕುಸಿಯುತ್ತಿದೆ. ಪೊಲೀಸ್ ಕ್ರಮಗಳಿಂದ ವಿದ್ಯಾರ್ಥಿ ಯುವಜನರ ಧ್ವನಿ ಮತ್ತು ಅವರ ಕನಸುಗಳನ್ನು ಭಗ್ನಗೊಳಿಸಲು ಸಾಧ್ಯವಾಗದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಎಚ್.ಆರ್ ನವೀನ್ ಕುಮಾರ್ ಹೇಳಿದರು. 


ಅವರು ಇಂದು ನಗರದ ಸಹೋದಯ ಸಭಾಂಗಣದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ನಡೆದ 14ನೇ ಮಂಗಳೂರು ನಗರ ಯುವಜನ ಸಮ್ಮೇಳನವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.


ನಿರುದ್ಯೋಗ ಸಮಸ್ಯೆ ವಿರಾಟ್ ಸ್ವರೂಪ ಪಡೆದುಕೊಂಡಿದೆ ಇದರಿಂದಾಗಿ ಹಸಿವು, ಬಡತನದ ಪ್ರಮಾಣ ತಾರಕಕ್ಕೆ ಏರಿದೆ. ಯುವಜನರ ಭಾವನೆಗಳು ನಿರ್ಲಕ್ಷಿಸಲ್ಪಡುತ್ತಿದೆ ಮತ್ತು ಯುವಜನರನ್ನು ಜಾತಿ, ಧರ್ಮದ ಗಲಾಟೆಗೆ ದುರ್ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು ದೇಶದಲ್ಲಿ ಯುವಜನರ ಹಕ್ಕುಗಳ ಪ್ರಾಪ್ತಿಗಾಗಿ ಯುವಜನ ಚಳುವಳಿ ತೀವ್ರಗೊಳ್ಳಬೇಕೆಂದು ಆಗ್ರಹಿಸಿದರು.


ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮುಖ್ಯ ಅತಿಥಿ ಆಗಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಅಪರಾಧಗಳನ್ನು ಧರ್ಮದ ಆಧಾರದಲ್ಲಿ ನೋಡಿ ಪ್ರತಿಕ್ರಿಯಿಸುವ ಮನೋಭಾವನೆಯನ್ನು ಸೋಲಿಸಬೇಕಿದೆ. ಸ್ವಧರ್ಮ ಜನರೊಳಗೆ ನೈತಿಕ ಪೊಲೀಸ್ ಗಿರಿ ಅಥವಾ ಸಂಘರ್ಷ ನಡೆದಾಗ ರಾಜಿ ಪಂಚಾಯತಿಕೆ ನಡೆಸುವ ಮನಸ್ಥಿತಿ ಅನ್ಯಕೋಮಿನ ಜನರೊಡನೆ ಸಂಘರ್ಷ ನಡೆದಾಗ ರಾಜಿ ಸೂತ್ರ ಯಾಕೆ ಫಲಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು ಜಿಲ್ಲೆಯಲ್ಲಿ ಕೋಮು ಪ್ರಚೋದಿತ ರಾಜಕಾರಣವನ್ನು ವಿಫಲಗೊಳಿಸಬೇಕು ಎಂದು ಅವರು ಹೇಳಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರತಿನಿಧಿ ಅಧಿವೇಶನ ಉದ್ಘಾಟಿಸಿದರು.

ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಸಮಾರೋಪ ಭಾಷಣಗೈದರು.

ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಜಿಲ್ಲಾ ಮುಖಂಡರಾದ ಆಜ್ಲಾನ್, ವಿನಾಯಕ, ಉಪಸ್ಥಿತರಿದ್ದರು.

ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಸ್ವಾಗತಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಮಾಧುರಿ ಬೋಳಾರ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article