ಅರಣ್ಯದಂಚಿನ ಗ್ರಾಮೀಣ ಭಾಗಗಳಲ್ಲಿ ಆನೆ ತೊಂದರೆ: ದಿಶಾ ಸಭೆಯಲ್ಲಿ ಚರ್ಚೆ
ಸುಳ್ಯ ಶಾಸಕಿ ಭಾಗೀರಥಿ ಮಾತನಾಡಿ, ತೋಟಗಳಿಗೆ ನುಗ್ಗುತ್ತಿರುವ ಆನೆಗಳು ಸಾಕಷ್ಟುಬೆಳೆಹಾನಿಯನ್ನು ಮಾಡುತ್ತಿವೆ. ಅರಣ್ಯ ಇಲಾಖೆಯವರು ಹಗಲು ಆನೆಗಳನ್ನು ಓಡಿಸಿಬಿಡುತ್ತಾರೆ. ರಾತ್ರಿ ಅವುಗಳು ಮತ್ತೆ ಬಂದು ದಾಳಿ ಮಾಡುತ್ತಿವೆ. ಆನೆ ಕ್ಯಾಂಪ್ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಆನೆಗಳು ತುಂಬಾ ಹಾವಳಿ ನೀಡುತ್ತಿರುವಲ್ಲಿಂದ ಅವುಗಳನ್ನು ಸ್ಥಳಾಂತರಿಸುವ ಕಾರ್ಯವಾದರೂ ಮಾಡಿ ಎಂದು ಒತ್ತಾಯಿಸಿದರು.
ಸಹಾಯಕ ಅರಣ್ಯ ಅಧಿಕಾರಿ ಪ್ರತಿಕ್ರಿಯಿಸಿ, ಸುಬ್ರಹ್ಮಣ್ಯ ಗುಂಡ್ಯದಲ್ಲಿ ಆನೆಕ್ಯಾಂಪ್ ಮಾಡಲು ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆನೆವಾಚ್ ತಂಡದ ಮೂಲಕ 25 ಮಂದಿ ಸಿಬ್ಬಂದಿ ನೇಮಕವಾಗಿದ್ದು, ಆನೆಗಳನ್ನು ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ತೋಟ, ಕೃಷಿ ಬೆಳೆ ನಾಶಕ್ಕೆ ಸಂಬಂಧಿಸಿ ಪರಿಹಾರ ನೀಡುವ ಕಾರ್ಯವೂ ನಡೆಯುತ್ತಿದೆ. 2026-27ನೆ ಸಾಲಿನಲ್ಲಿ 19 ಮಂದಿ ರೈತರಿಗೆ 3.30 ಲಕ್ಷ ರೂ. ಪರಿಹಾರ ಒದಗಿಸಲಾಗಿದ್ದು, 381 ಮಂದಿಗೆ 73 ಲಕ್ಷ ರೂ. ಪರಿಹಾರ ಒದಗಿಸಬೇಕಿದ್ದು, ಅನುದಾನ ಇನ್ನೂ ಬಂದಿಲ್ಲ ಎಂದರು.
ಸತ್ತ ನವಿಲಿನ ಅಕ್ರಮ ದಫನ..
ಮಂಗಳೂರಿನ ಎಸ್‌ಇಝೆಡ್ ವ್ಯಾಪ್ತಿಯ ಜಿಎಂಪಿಎಲ್ ಸಂಸ್ಥೆಯು ತಮ್ಮ ವ್ಯಾಪ್ತಿಯಲ್ಲಿ ಸತ್ತಿದ್ದ ನವಿಲನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ದಫನ ಮಾಡಿದ್ದಾರೆ. ಈ ಸಂಸ್ಥೆಯಿಂದ ವಿಸರ್ಜನೆಯಾಗುವ ಡ್ರೈನೇಜ್‌ನಲ್ಲಿ ವಿಷಪೂರಿತ ಅಂಶವಿರುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿಂದ ವ್ಯಕ್ತವಾಗಿತ್ತು. ಇದಲ್ಲದೆ ಶಬ್ಧಮಾಲಿನ್ಯವೂ ಜೋರಾಗಿದೆ. ಇಂತಹ ಸಂಸ್ಥೆಯ ಆವರಣದಲ್ಲಿ ರಾಷ್ಟ್ರ ಪಕ್ಷಿ ಮೃತಪಟ್ಟಿದ್ದರೆ ಅದನ್ನು ತಿಳಿಸದೆ ಅಂತ್ಯಕ್ರಿಯೆ ನಡೆಸಿರುವುದು ಕಾನೂನುಬಾಹಿರ ಎಂದು ದಿಶಾ ಸಮಿತಿಯ ಸ್ಥಳೀಯ ನಾಮನಿರ್ದೇಶಿತ ಸದಸ್ಯರೊಬ್ಬರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನವಿಲಿನ ಕಳೆಬರಹದ ಫಾರೆನ್ಸಿಕ್ ವರದಿಯನ್ನು ಮಾಡಿದ್ದು, ಅಂತಹ ವಿಷ ಪ್ರಾಶನದ ಬಗ್ಗೆ ಮಾಹಿತಿ ಬಂದಿಲ್ಲ. ತಮಗೆ ಅರಿವಿಲ್ಲದೆ ದಫನ ಮಾಡಿರುವುದಾಗಿ ತಿಳಿಸಿದ ಕಾರಣ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದರು.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಅರಿವಿಲ್ಲ ಎಂದರೆ ಆಗದು. ಆ ಸಂಸ್ಥೆಗೆ ನೋಟೀಸು ನೀಡಿ ಅಗತ್ಯ ಕ್ರಮ ವಹಿಸಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಭಿಯಾನಕ್ಕೆ ಸೂಚನೆ..
ಪಿಎಂ ಸೂರ್ಯಘರ್ ಯೋಜನೆಯ ಪ್ರಗತಿಯ ಕುರಿತಂತೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಗೃಹಜ್ಯೋತಿಯಿಂದಾಗಿ ಈ ಯೋಜನೆಗೆ
ಜನರು ಆಸಕ್ತಿ ತೋರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಗೃಹಜ್ಯೋತಿಯಿಂದ ಹೊರತುಪಡಿಸಿ 1 ಲಕ್ಷ ಗ್ರಾಹಕರು ಇರುವಾಗ ಇನ್ನೂ 3000 ಮನೆಗಳಿಗೂ ಯೋಜನೆ ತಲುಪಿಲ್ಲ ಎಂದಾದರೆ ಈ ಯೋಜನೆಯ ಬಗ್ಗೆ ಗಂಭೀರತೆ ಇಲ್ಲವೆಂದೇ ಕಾಣುತ್ತದೆ. ಈ ಬಗ್ಗೆ ಅಭಿಯಾನ ನಡೆಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕ ಪರಿಹಾರಕ್ಕೆ ಒತ್ತು ನೀಡಿ..
ಪ್ರಸಕ್ತ ಸಾಲಿನ ಮುಂಗಾರಿನಿಂದಾಗಿ ದ.ಕ. ಜಿಲ್ಲೆಯಲ್ಲಿ 18.92 ಎಕರೆ ಅಡಿಕೆ ಬೆಳೆಗೆ ಹಾನಿಯಾಗಿದೆ. 137 ರೈತರಿಗೆ ಸುಮಾರು 5.6 ಲಕ್ಷ ರೂ. ಪರಿಹಾರಕ್ಕೆ ವರದಿ ತಯಾರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.
ಎನ್‌ಡಿಆರ್‌ಎಫ್‌ನಡಿ ಕೃಷಿ ಬೆಳೆ ನಾಶಕ್ಕೆ ಎಕರೆಗೆ 6500 ರೂ.ನಿಂದ 21,000 ರೂ.ವರೆಗೆ ಮಾತ್ರವೇ ಪರಿಹಾರ ದೊರಕುತ್ತದೆ. ಅದೇ ಹವಾಮಾನ ಆಧಾರಿತ ಬೆಳೆ ವಿಮೆಯಡಿ ಹೆಚ್ಚಿನ ಪರಿಹಾರ ಮೊತ್ತ ಲಭ್ಯವಾಗುವ ಹಿನ್ನೆಲೆಯಲ್ಲಿ ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಡಿಸಿಪಿ ಮಿಥುನ್, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಉಪಸ್ಥಿತರಿದ್ದರು.