‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಪುಸ್ತಕ ಬಿಡುಗಡೆ
ಶ್ರೀನಿವಾಸ ಮಲ್ಯ, ಕಾರ್ನಾಡ್ ಸದಾಶಿವರಾಯರು, ಬಿ.ವಿ. ಕಕ್ಕಿಲ್ಲಾಯ, ಶಿವರಾಮ ಕಾರಂತರು, ಬೆನಗಲ್ ನರಸಿಂಹರಾಯರು, ಕುದ್ಮುಲ್ ರಂಗರಾಯರು, ಅಮೆಂಬಳ ಸುಬ್ಬರಾಯ ಪೈ, ಹಾಜಿ ಅಬ್ದುಲ್ಲಾ, ಟಿ.ಎಂ.ಎ. ಪೈ ಸೇರಿದಂತೆ ಕರಾವಳಿಯನ್ನು ಕಟ್ಟಿದ ಮಹನೀಯರ ಸಾಲಿನಲ್ಲಿ ಮೊಳಹಳ್ಳಿ ಶಿವರಾಯರು ಕೂಡ ಪ್ರಮುಖರಾಗಿ ಗುರುತಿಸಿಕೊಂಡಿದ್ದು, ಇವರೆಲ್ಲರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರನ್ನು ಸದಾ ಸ್ಮರಿಸಿಕೊಳ್ಳುವಂತಹ ಕೃತಿಗಳು ಹೊರಬರಬೇಕಿದೆ ಎಂದರು.
ಕರಾವಳಿಯ ನಗರಗಳ ಅಭಿವೃದ್ಧಿಗೆ ಶ್ರೀನಿವಾಸ ಮಲ್ಯರ ಕೊಡುಗೆ ಇರುವಂತೆ, ಗ್ರಾಮಗಳ ಅಭಿವೃದ್ಧಿಯಲ್ಲಿ ಮೊಳಹಳ್ಳಿ ಶಿವರಾಯರ ಪಾತ್ರ ಗುರುತರವಾಗಿದ್ದು, ಅವರು ಪ್ರಾರಂಭಿಸಿದ ಬಹುತೇಕ ಶಾಲೆಗಳಿಗೆ ಖಾತಾ ಪತ್ರಗಳೇ ಇರಲಿಲ್ಲ. ಅವತ್ತು ಸರ್ಕಾರಿ ಶಾಲೆ ಸ್ಥಾಪಿಸಲು ಉಚಿತವಾಗಿ ನೀಡಿದ್ದ ಜಾಗದಲ್ಲಿ ಪ್ರಾರಂಭವಾದ ಶಾಲೆಗಳಲ್ಲಿ ಕೆಲವೊಂದು ಇಂದು ಮಕ್ಕಳಿಲ್ಲದೆ ಮುಚ್ಚಿ ಹೋಗಿವೆ. ಈಗ ಕೊಡುಗೆ ನೀಡಿದ ದಾನಿಗಳ ಮೊಮ್ಮಕ್ಕಳು ತಮ್ಮ ಹೆಸರಿನಲ್ಲಿರುವ ಆ ಭೂಮಿಯನ್ನು ಬೇರೆಯವರಿಗೆ ಪರಭಾರೆ ಮಾಡುತ್ತಿರುವ ಬೆಳವಣಿಗೆಗಳು ನಡೆದಿವೆ. ಇದೀಗ ಆ ಸಮಸ್ಯೆಯನ್ನು ಹಂತಹಂತವಾಗಿ ಸುಧಾರಿಸಿಕೊಂಡು ಬರಲಾಗುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು ಅತಿಥಿಗಳಾಗಿ ಭಾಗವಹಿಸಿ, ಮೊಳಹಳ್ಳಿ ಶಿವರಾಯರ ಸೇವೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಇಂದಿನ ಸಹಕಾರಿ ಕ್ಷೇತ್ರಕ್ಕಿದೆ ಎಂದು ತಿಳಿಸಿದರು.
ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ ಡಾ. ನಿಕೇತನ ಅವರು ‘ಮಹಿಳಾ ಸಬಲೀಕರಣದ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ವಿಷಯದ ಕುರಿತು ಹಾಗೂ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಅವರು ‘ಶೈಕ್ಷಣಿಕ ಕೊಡುಗೆಯ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ವಾರುಣಿ ನಾಗರಾಜ್ ನಿರೂಪಿಸಿದರು. ಪುಸ್ತಕದ ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
