ಕೆಬಿಎಲ್ ಫಿನ್‌ಶೂರೆನ್ಸ್ ಪೋರ್ಟಲ್‌ಗೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕ್
ಈ ಪೋರ್ಟಲ್ ಮೂಲಕ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿ ವಿಮಾ ವ್ಯವಹಾರಗಳಿಗೆ ಸಂಬಂಧಿಸಿದ ಲೀಡ್‌ಗಳ ಸೃಷ್ಟಿ, ಅವುಗಳ ಮೇಲ್ವಿಚಾರಣೆ, ಪಾಲಿಸಿ ಸ್ಥಿತಿಯ ಮಾಹಿತಿ ಹಾಗೂ ನಿರ್ವಹಣಾ ವರದಿಗಳನ್ನು (MIS) ತ್ವರಿತವಾಗಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಫಿನ್‌ಟೆಕ್ ಸಂಸ್ಥೆಯಾದ ಸ್ಪ್ರಿಂಟ್‌ಮನಿ (ವೈಲ್ಡ್‌ಫ್ಲವರ್ ಬಿಸಿನೆಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್, "ಕೆಬಿಎಲ್ ಫಿನ್‌ಶೂರೆನ್ಸ್ ಪೋರ್ಟಲ್ ನಮ್ಮ ಡಿಜಿಟಲ್ ಪರಿವರ್ತನೆಯ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ತಂತ್ರಜ್ಞಾನದ ನೆರವಿನಿಂದ ಬ್ಯಾಂಕಿನ ಬ್ಯಾಂಕಾಶ್ಯುರನ್ಸ್ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಇದರಿಂದ ವಿಮಾ ವ್ಯವಹಾರ ವೃದ್ಧಿಯಾಗುವುದರ ಜೊತೆಗೆ ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ಸಮಗ್ರ ಹಣಕಾಸು ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ" ಎಂದು ಹೇಳಿದರು.
ಸ್ಪ್ರಿಂಟ್‌ಮನಿಯ ಸಂಸ್ಥಾಪಕ ಹಾಗೂ ಸಿಇಒ ಅಮಿತ್ ಕುಮಾರ್, "ಕರ್ನಾಟಕ ಬ್ಯಾಂಕ್‌ನೊಂದಿಗೆ ಈ ಯೋಜನೆಯಲ್ಲಿ ಕೈಜೋಡಿಸಿರುವುದು ಸಂತಸದ ಸಂಗತಿ. ಬುದ್ಧಿವಂತ ಸ್ವಯಂಚಾಲಿತ ವ್ಯವಸ್ಥೆ ಹಾಗೂ ವಿಮಾ ಕಂಪನಿಗಳೊಂದಿಗೆ ಏಕೀಕರಣದ ಮೂಲಕ ಈ ಪೋರ್ಟಲ್ ಬ್ಯಾಂಕ್‌ನ ವಿಮಾ ವ್ಯವಹಾರಕ್ಕೆ ಹೊಸ ಉತ್ತೇಜನ ನೀಡಲಿದೆ" ಎಂದು ತಿಳಿಸಿದರು.
ಕರ್ಣಾಟಕ ಬ್ಯಾಂಕ್‌ನ ಶಾಖಾ ಬ್ಯಾಂಕಿಂಗ್ ಮತ್ತು ಐಟಿ ವಿಭಾಗದ ಮಹಾಪ್ರಬಂಧಕ ರಘುರಾಮ್ ಎಚ್.ಎಸ್. ಮಾತನಾಡಿ, "ಲೀಡ್ ಸೃಷ್ಟಿಯಿಂದ ಹಿಡಿದು ಪಾಲಿಸಿ ಟ್ರ್ಯಾಕಿಂಗ್‌ವರೆಗೆ ಸಂಪೂರ್ಣ ವಿಮಾ ವ್ಯವಹಾರವನ್ನು ಈ ಪೋರ್ಟಲ್ ಸುಲಭಗೊಳಿಸಲಿದೆ. ಶಾಖೆಗಳ ಕಾರ್ಯಕ್ಷಮತೆ ಹೆಚ್ಚಿಸುವುದರ ಜೊತೆಗೆ ಗ್ರಾಹಕರಿಗೆ ವೇಗದ ಮತ್ತು ಸುಗಮ ಸೇವೆ ನೀಡಲು ಇದು ನೆರವಾಗಲಿದೆ" ಎಂದರು.
ವಿವಿಧ ಜೀವ ವಿಮಾ ಹಾಗೂ ಸಾಮಾನ್ಯ ವಿಮಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕರ್ನಾಟಕ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.