ಡಿಸಿ ಮನ್ನಾ ಭೂಮಿ ಹಂಚಿಕೆಯಾಗದಿದ್ದರೆ ಪ್ರಬಲ ಹೋರಾಟ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರ ಎಚ್ಚರಿಕೆ

ಡಿಸಿ ಮನ್ನಾ ಭೂಮಿ ಹಂಚಿಕೆಯಾಗದಿದ್ದರೆ ಪ್ರಬಲ ಹೋರಾಟ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲು ಸರಕಾರ ಕ್ರಮ ವಹಿಸಬೇಕು. ಒಂದು ತಿಂಗೊಳಗೆ ಈ ಕಾರ್ಯ ನಡೆಯದಿದ್ದರೆ ರಾಜ್ಯದೆಲ್ಲೆಡೆ ಪ್ರಬಲ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಂಚಾಲಕ ಸೋಮಶೇಖರ್ ಎಚ್ಚರಿಸಿದ್ದಾರೆ.

ಮಂಗಳೂರು ಉರ್ವಾಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದಿ. ಎಂ. ದೇವದಾಸ್ ಅವರ ಈ ಹೋರಾಟ ಇನ್ನೂ ಜೀವಂತವಾಗಿದ್ದು, ಇದಕ್ಕೆ ತಾತ್ವಿಕ ಅಂತ್ಯ ಕಾಣಬೇಕಾಗಿದೆ. ಈ ಬಗ್ಗೆ ಇಂದು ನಡೆದ ನುಡಿನಮನ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನೆಯು ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

ದ.ಕ. ಜಿಲ್ಲೆಯಲ್ಲಿ 8510 ಎರೆ ಡಿಸಿ ಮನ್ನಾ ಭೂಮಿಯಲ್ಲಿ 7366 ಎಕರೆ ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ. ಉಳಿದ 1144 ಎಕರೆ ಭೂಮಿಯಲ್ಲಿ 977 ಎಕರೆ ಜಮೀನು ಈಗಾಗಲೇ ದಲಿತೇತರರಿಂದ ಅತಿಕ್ರಮಣವಾಗಿದೆ. ಸದ್ಯ 190 ಎಕರೆ ಜಮೀನು ಹಂಚಿಕೆಗೆ ಲಭ್ಯವಿದ್ದು ಅದಕ್ಕೂ ಮೀನ ಮೇಷ ಎಣಿಸಲಾಗುತ್ತಿದೆ. ಇದು ಜಿಲ್ಲಾಡಳಿತ ಹಾಗೂ ಸರಕಾರದ ದಲಿತ ವಿರೋಧಿ ನೀತಿ ಎಂದು ಅವರು ಆಕ್ಷೇಪಿಸಿದರು.

ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲೆಯ ದಲಿತ ಸಂಘಟನೆಗಳು 2016 ಹಾಗೂ 2017ರಲ್ಲಿ ದೊಡ್ಡ ಪ್ರತಿಭಟನೆ ನಡೆಸಿದ ಪರಿಣಾಮ ಆಗಿನ ಜಿಲ್ಲಾಧಿಕಾರಿ 2017ರಲ್ಲಿ ವಿಶೇಷ ಭ ಮಂಜೂರಾತಿ ನಿಯಮ (ಡ್ರಾಫ್ಟ್ ರೂಲ್ಸ್) ಸಿದ್ಧಪಡಿಸಿ ಸರಕಾರಕ್ಕೆ ಅನುಮೋದನೆಗೆ ಕಳಿಸಿದ್ದಾರೆ. ಇದಾಗಿ 9 ವರ್ಷ ಕಳೆದರೂ ಸರಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ. 2017ರ ವಿಶೇಷ ಭೂ ಮಂಜೂರಾತಿ ನಿಯಮದ ಬದಲು ಉಪವಿಭಾಗಾಧಿಕಾರಿಯ ವರದಿಯಂತೆ ಲಭ್ಯವಿರುವ ಡಿಸಿ ಮನ್ನಾ ಭೂಮಿಯನ್ನು ಬಡತನ ರೇಖೆಗಿಂತ ಕಡಿಮೆ ಇರುವ ಪರಿಶಿಷ್ಟ ಕುಟುಂಬಗಳಿಗೆ ಮಂಜೂರು ಮಾಡಲು 1969ರ ಭೂ ಮಂಜೂರಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಮಂಜೂರಾತಿಗೆ ಕ್ರಮ ಕೈಗೊಳ್ಳಬಹುದು ಎಂದು ಹಿಂದಿನ ಜಿಲ್ಲಾಧಿಕಾರಿ ಕಂದಾಯ ಲಾಖೆಯ ಪ್ರಧಾನ ಕಾರ್ಯದರ್ಶಿಗೆ 2024ರ ಡಿಸೆಂಬರ್ 20ರಂದು ಪತ್ರ ಬರೆದಿದ್ದರೂ ಇದುವರೆಗೂ ಸರಕಾರದಿಂದ ಉತ್ತರ ಬಂದಿಲ್ಲ. ನಿವೇಶನಕ್ಕಾಗಿ ಮಂಗಳೂರಿನಲ್ಲಿ 5590 ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸದಿರುವುದು ಬೇಸರದ ಸಂಗತಿ. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಈ ಭೂಮಿಯನ್ನು ಹಂಚಿಕೆ ಮಾಡುವಲ್ಲಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಂದಾಯ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೊಣೆಗಾರಿಕೆಯಿದ್ದು, ಅವರು ಈ ಬಗ್ಗೆ ಕ್ರಮ ತಕ್ಷಣ ಕ್ರಮ ವಹಿಸಬೇಕು ಎಂದು ಸೋಮಶೇಖರ್ ಆಗ್ರಹಿಸಿದರು.

ಗೃಹ ಸಚಿವರು ಹಾಗೂ ಕಂದಾಯ ಇಲಾಖೆಯ ಮುಖ್ಯಸ್ಥರ ಬಳಿ ಈ ಬಗ್ಗೆ ಚರ್ಚಿಸಲಾಗಿದೆ. ಸರಕಾರ ತಕ್ಷಣ ಕಡತಕ್ಕೆ ಅನುಮೋದನೆ ನೀಡಿ ನಿವೇಶನ ರಹಿತರಿಗೆ ಭೂಮಿ ಹಂಚಿಕೆ ಮಾಡದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಯಕರ್ತರನ್ನು ಒಗ್ಗೂಡಿಸಿ ಕಂದಾಯ ಸಚಿವರ ಮನೆ ಎದುರು ಪ್ರತಿಭಟನೆ ಮಾಡುವುದಾಗಿ ಸೋಮಶೇಖರ್ ತಿಳಿಸಿದರು.

 ಕಳೆದ ಸುಮಾರು 9 ವರ್ಷಗಳಿಂದಲೂ ಡಿಸಿ ಮನ್ನಾ ಭೂಮಿ ಹಂಚಿಕೆಗೆ ಜಿಲ್ಲಾಡಳಿತ ವಿಫಲವಾಗಿದೆ. ವಿಶೇಷ ಭೂ ಮಂಜೂರಾತಿ ನಿಯಮಕ್ಕೆ ಸರಕಾರ ಅನುಮೋದನೆಗೆ ಕಡತವನ್ನು ರವಾನಿಸಿ ಸುಮ್ಮನಿದೆ. ದಲಿತರ ತಾಳ್ಮೆಗೂ ಮಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಎಂದು ಸಂಘಟನೆಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ್ ಆಗ್ರಹಿಸಿದರು.

ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿ ಭಾರೀ ಪ್ರಮಾಣದಲ್ಲಿ ಅತಿಕ್ರಮಣವಾಗಿದ್ದು, ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದು ಹೇಗೆ ಎದು ಪ್ರಶ್ನಿಸಿದ ರಾಜ್ಯ ಸಂಚಾಲಕರಾದ ವೆಂಕಟಗಿರಿಯಯ್ಯ, ಎಸ್‌ಸಿಎಸ್‌ಟಿಗಳಿಗೆ ಮೋಸ ಮಾಡಿದರೆ ದಲಿತ ದೌರ್ಜನ್ಯ ಕಾನೂನಿನಡಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು. ತಕ್ಷಣ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ನಿವೇಶನ ರಹಿತರಿಗೆ ಭೂಮಿ ಹಂಚಿಕೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೇರಿದಂತೆ ರಾಜ್ಯ ಸರಕಾರದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಡಿಸಿ ಮನ್ನಾ ಭೂಮಿ ಒದಗಿಸುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಅದನ್ನು ಈಡೇರಿಸದಿದ್ದರೆ ದಲಿತರಿಗೆ ದ್ರೋಹವೆಂದು ಪರಿಗಣಿಸಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ. ಸರಕಾರ ಅದಕ್ಕೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು.

 ಗೋಷ್ಟಿಯಲ್ಲಿ ದಲಿತ ಮುಖಂಡರಾದ ನಾರಾಯಣ ಸ್ವಾಮಿ, ಅಂದಾನಿ ಸೋಮನಹಳ್ಳಿ, ಶಿವಮೂರ್ತಿ, ಸದಾಶಿವ ಪಡುಬಿದ್ರಿ, ಸರೋಜಿನಿ ಬಂಟ್ವಾಳ, ರಾಘವೇಂದ್ರ, ರಘು ಎಕ್ಕಾರು, ಕೃಷ್ಣಾನಂದ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article