ಪುತ್ತೂರಿನ ಶಾಂತಿಯುತ ಬಂದ್ ಯಶಸ್ವಿ: ಸತೀಶ್ ಕುಂಪಲ

ಪುತ್ತೂರಿನ ಶಾಂತಿಯುತ ಬಂದ್ ಯಶಸ್ವಿ: ಸತೀಶ್ ಕುಂಪಲ

ಮಂಗಳೂರು: ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪುತ್ತೂರಿನಲ್ಲಿ ನಡೆದ ಶಾಂತಿಯುತ ಪ್ರತಿಭಟನೆ ಯಶಸ್ವಿಯಾಗಿದ್ದು, ಇದಕ್ಕೆ ಬೆಂಬಲ ನೀಡಿದ ಪುತ್ತೂರಿನ ಸಮಸ್ತ ಜನತೆಗೆ ಹಾಗೂ ಪ್ರತಿಭಟನೆಯನ್ನು ಸಂಘಟಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೃತ್ಪೂರ್ವಕ ಧನ್ಯವಾದಗಳನ್ನು ಪ್ರಕಟಣೆಯ ಮೂಲಕ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಸಾಮಾನ್ಯ ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಕಳವಳಕಾರಿ. ಪುತ್ತೂರಿನ ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಪೊಲೀಸರು ಅಂದೇ ಕಾನೂನು ಬದ್ಧವಾಗಿ, ನಿಷ್ಪಕ್ಷಪಾತವಾಗಿ ಹಾಗೂ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. 

ಸರಕಾರದ ನಿರ್ಲಕ್ಷ್ಯ ಮತ್ತು ಪೊಲೀಸರ ನಿಷ್ಕ್ರಿಯತೆಯೇ ಜನರಲ್ಲಿ ಅಸಮಾಧಾನ ಹೆಚ್ಚಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ಇಂದು ಪುತ್ತೂರಿನ ಜನತೆ ಶಾಂತಿಯುತ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ತಮ್ಮ ಆಕ್ರೋಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಇದು ಯಾವುದೇ ಒಂದು ಸಂಘಟನೆಯ ಧ್ವನಿಯಷ್ಟೇ ಅಲ್ಲ, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಜನರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಬೇಕು ಎಂಬ ಪುತ್ತೂರಿನ ಜನತೆಯ ಸ್ಪಷ್ಟ ಸಂದೇಶವಾಗಿದೆ.

ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ನಡೆದ ಈ ಶಾಂತಿಯುತ ಹೋರಾಟಕ್ಕೆ ಬೆಂಬಲಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಧನ್ಯವಾದಗಳು. ಜನರ ಧ್ವನಿಯನ್ನು ಸರಕಾರ ನಿರ್ಲಕ್ಷಿಸಬಾರದು. ಕಾನೂನು ಸುವ್ಯವಸ್ಥೆ ಹಾಗೂ ಜನರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇರಬಾರದು ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article