ಕರಾವಳಿಯಲ್ಲಿ ಮಳೆ ಇಳಿಮುಖ
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರದಲ್ಲಿ ಬಹುತೇಕ ಇಳಿಮುಖ ಕಂಡುಬಂದಿದೆ.
ಶುಕ್ರವಾರ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಉಭಯ ಜಿಲ್ಲೆಗಳಲ್ಲಿ ದಿನದ ಬಹುತೇಕ ಭಾಗ ಮೋಡಮುಸುಕಿದ ವಾತಾವರಣವಿತ್ತು. ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಹಾಗೂ ಬಲವಾದ ಗಾಳಿ ಸಹಿತ ಸಾಧಾರಣದಿಂದ ಮಳೆಯಾಗಿದೆ.
ಪಶ್ಚಿಮ ಘಟ್ಟದ ಕೆಳಭಾಗದ ಸೂಕ್ಷ್ಮ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ ಹಾಗೂ ಆಗುಂಬೆ ಘಾಟಿ ಸುತ್ತಮುತ್ತ ಶನಿವಾರ ರಾತ್ರಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಗಾಳಿಯ ವೇಗವು ಗಂಟೆಗೆ 35 ರಿಂದ 40 ಕಿಮೀ ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಅಪಾಯಕಾರಿ ಪ್ರದೇಶಗಳಿಗೆ ಇಳಿಯದಂತೆ ಮತ್ತು ಕಡಲತೀರದ ನಿವಾಸಿಗಳು ಜಾಗರೂಕರಾಗಿರಲು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶುಕ್ರವಾರ ಕರಾವಳಿಯಲ್ಲಿ ಸರಾಸರಿ ಗರಿಷ್ಠ 33.2ಡಿ.ಸೆ ಹಾಗೂ ಕನಿಷ್ಠ 23.8ಡಿ.ಸೆ ತಾಪಮಾನ ದಾಖಲಾಗಿದೆ. ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 19.6 ಮಿ.ಮೀ ಮಳೆ ದಾಖಲಾಗಿದೆ. ಸಧ್ಯಕ್ಕೆ ಕರಾವಳಿಯುದ್ದಕ್ಕೂ ಮಳೆಯ ಪ್ರಭಾವ ಕ್ಷೀಣಗೊಂಡಿದ್ದು, ಆಗಸ್ಟ್ 16ರಿಂದ ಮಳೆಯ ಆರ್ಭಟ ಕಡಿಮೆಯಾಗಿ ಬಿಡುವಿನ ವಾತಾವರಣ ಹೆಚ್ಚಾಗುವ ಲಕ್ಷಣಗಳಿವೆ.