ಸಾಲಕ್ಕೆ ಮೀಟರ್ ಬಡ್ಡಿ: ಹಣ ವಸೂಲಿಗೆ ಜೀವ ಬೆದರಿಕೆ

ಸಾಲಕ್ಕೆ ಮೀಟರ್ ಬಡ್ಡಿ: ಹಣ ವಸೂಲಿಗೆ ಜೀವ ಬೆದರಿಕೆ

ಮಂಗಳೂರು: ಹಣದ ತುರ್ತು ಅವಶ್ಯಕತೆಗಾಗಿ ಪಡೆದ ಸಾಲಕ್ಕೆ ಮೀಟರ್ ಬಡ್ಡಿ ಹಾಗೂ ಚಕ್ರಬಡ್ಡಿಯ ಸುಳಿಗೆ ಸಿಲುಕಿಸಿ, ಲಕ್ಷಾಂತರ ರೂ. ವಸೂಲಿ ಮಾಡಿದ್ದಲ್ಲದೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.

ದೂರುದಾರರಾದ ಬಬಿತಾ ಎಂಬುವವರಿಗೆ ಹಣದ ಅವಶ್ಯಕತೆ ಇದ್ದ ಕಾರಣ, ಅವರೊಂದಿಗೆ ಕೆಲಸ ಮಾಡುತ್ತಿದ್ದ ರಾಜೇಶ್ವರಿ ಎಂಬವರ ಮೂಲಕ ಕೊಟ್ಟಾರ ಚೌಕಿ ನಿವಾಸಿ ತಾನ್ ಸಿಂಗ್ ಎಂಬಾತನಿಂದ ಜುಲೈ 2026 ರಲ್ಲಿ ಹಂತ ಹಂತವಾಗಿ ಐದು ಬಾರಿ ಒಟ್ಟು ರೂ. 4,50,000 ಸಾಲ ಪಡೆದುಕೊಂಡಿದ್ದರು. ಆರಂಭದಲ್ಲಿ ತಿಂಗಳ ಬಡ್ಡಿಗೆ ಹಣ ನೀಡಿದ್ದ ಆತ, ತದನಂತರ ದಿನದ ಬಡ್ಡಿಯಂತೆ ರೂ. ಒಂದು ಲಕ್ಷಕ್ಕೆ ಬರೋಬ್ಬರಿ ರೂ. 15,000 ಬಡ್ಡಿ ನೀಡಬೇಕೆಂದು ಬೆದರಿಕೆ ಹಾಕಲಾರಂಭಿಸಿದ್ದನು.

ತಮ್ಮ ಬಳಿ ಹಣವಿಲ್ಲದ ಕಾರಣ ಬಬಿತಾ ಅವರು ಪರಿಚಯದವರಿಂದ ಸಾಲ ಮಾಡಿ, ಈತನಕ ಸುಮಾರು 7 ರಿಂದ 8 ಲಕ್ಷ ರೂ.ಗಳವರೆಗೆ ಬಡ್ಡಿ ಹಣವನ್ನು ರಾಜೇಶ್ವರಿ ಅವರ ಮೂಲಕ ತಾನ್ ಸಿಂಗ್‌ಗೆ ಮುಟ್ಟಿಸಿದ್ದರು. ನಂತರ ಅಸಲು ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿ, ಜುಲೈ 17, 2026 ರಂದು ರೂ. ೩ ಲಕ್ಷ ಹಣವನ್ನು ರಾಜೇಶ್ವರಿ ಮೂಲಕ ನೀಡಿದ್ದರು.

ಆದರೂ ಬಿಡದ ಆತ, ಇನ್ನೂ ಬಡ್ಡಿ ಸೇರಿ ನಾಲ್ಕೂವರೆ ಲಕ್ಷ ರೂ. ಬಾಕಿ ಇದೆ ಎಂದು ಹೇಳಿ, ಅದಕ್ಕೆ ಚಕ್ರಬಡ್ಡಿ ರೂ. 1 ಲಕ್ಷ ಸೇರಿಸಿ ಕೊಡಬೇಕೆಂದು ಪೀಡಿಸಿದ್ದಾನೆ. ಸಮಯಾವಕಾಶ ಕೋರಿದರೂ ಕೇಳದೆ, "ನಾನು ಧರ್ಮಕ್ಕೆ ಕೊಟ್ಟಿದ್ದೇನಾ, ನಿಮ್ಮಿಬ್ಬರನ್ನು ಸಾಯಿಸುತ್ತೇನೆ ಹಾಗೂ ನೀವು ಕೆಲಸ ಮಾಡುವ ಜಾಗಕ್ಕೆ ಬರುವುದಾಗಿ" ಬೆದರಿಕೆ ಹಾಕಿದ್ದಾನೆ.

ಜುಲೈ 23, 2026 ರಂದು ಇನ್ನೂ ರೂ. 9,37,000 ಹಣ ಬಾಕಿ ಇರುವುದಾಗಿ ತಿಳಿಸಿ ದೌರ್ಜನ್ಯ ಎಸಗಿದ್ದಾನೆ. ಮುಂದೆಯೂ ಚಕ್ರಬಡ್ಡಿ ನೆಪ ಬಳಸಿ ಮತ್ತಷ್ಟು ಹಣ ಸುಲಿಗೆ ಮಾಡುವ ಸಾಧ್ಯತೆಯಿರುವುದರಿಂದ, ಆರೋಪಿ ತಾನ್ ಸಿಂಗ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article