ಕಸ್ತೂರಿ ರಂಗನ್ ವರದಿ: ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಕ್ರಮ ಬೇಡ

ಕಸ್ತೂರಿ ರಂಗನ್ ವರದಿ: ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಕ್ರಮ ಬೇಡ


ಮಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕಗಳ ಕುರಿತು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಅರಣ್ಯಾಧಿಕಾರಿಗಳು ವರದಿ ಜಾರಿಯ ನೆಪದಲ್ಲಿ ಜನರನ್ನು ಒಕ್ಕಲೆಬ್ಬಿಸುವುದು, ಕೃಷಿ - ತೋಟಗಾರಿಕೆ ಹಾಗೂ ಮನೆ ನಿರ್ಮಾಣ ಕಾಮಗಾರಿಗಳಿಗೆ ಅಡ್ಡಿಪಡಿಸುವುದು ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ತನ್ನ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ಸಮಿತಿಯು ಸ್ಥಳೀಯ ಗ್ರಾಮ ಪಂಚಾಯಿತಿಗಳು, ಜನಪ್ರತಿನಿಧಿಗಳು ಅಥವಾ ಜನರೊಂದಿಗೆ ಸಮಾಲೋಚನೆ ನಡೆಸದೇ ಕೇವಲ ಹೆಲಿಕಾಪ್ಟರ್ ಮತ್ತು ವಿಮಾನಗಳ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದರು.

ಹಸಿರು ಕಂಡ ತಕ್ಷಣ ಅದನ್ನೆಲ್ಲ ಅರಣ್ಯ ಎಂದು ಪರಿಗಣಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ರಬ್ಬರ್, ಅಡಿಕೆ ತೋಟಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಜನವಸತಿ ಪ್ರದೇಶಗಳಿವೆ. ಕರ್ನಾಟಕದ 10 ಜಿಲ್ಲೆಗಳ 33 ತಾಲೂಕುಗಳ 1,533 ಗ್ರಾಮಗಳು (ಸುಮಾರು 20,668 ಚ.ಕಿ.ಮೀ ವ್ಯಾಪ್ತಿ) ಈ ವರದಿಯ ಪರಿಧಿಗೆ ಒಳಪಡುತ್ತಿದ್ದು, ಇದರಲ್ಲಿ ಶೇ. ೬೦ರಷ್ಟು ಭಾಗ ಸೂಕ್ಷ್ಮ ವಲಯವಲ್ಲ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಕರಾವಳಿ ಭಾಗದ ಶಾಸಕರು ಚರ್ಚಿಸಿದ್ದು, ಶೀಘ್ರವೇ ವಿಶೇಷ ಅಧಿವೇಶನ ಕರೆದು ವಿಸ್ತೃತ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ, ಜನರಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ದ್ವಂದ್ವ ನಿಲುವು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಚಿವ ಸಂಪುಟ ಸಭೆ..

ಕರಾವಳಿ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರ ಹಾಗೂ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಶೀಘ್ರವೇ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ ಗೊಂದಲಗಳು, ಕರಾವಳಿ ನಿಯಂತ್ರಣ ವಲಯ ಸಮಸ್ಯೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ ಎಂದರು.

ಹೈಕೋರ್ಟ್ ಪೀಠ..

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ (ಸರ್ಕ್ಯೂಟ್ ಅಥವಾ ಕಾಯಂ ಪೀಠ) ಸ್ಥಾಪನೆಯಾಗಬೇಕು ಎಂಬುದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾದರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ನ್ಯಾಯ ಸಿಗಲಿದೆ. ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಈ ಬಗ್ಗೆ ಸರ್ಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಪತ್ರ ಬರೆದು ಅಗತ್ಯ ಇರುವ ಎಲ್ಲ ಮೂಲಸೌಕರ್ಯ ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಕರಾವಳಿಯ ನೈಜ ಅಗತ್ಯತೆಯನ್ನು ಪರಿಗಣಿಸಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮಂಗಳೂರಿಗೆ ಸಮಿತಿಯನ್ನು ಕಳುಹಿಸಿ ಪರಿಶೀಲಿಸಬೇಕು ಹಾಗೂ ಮುಂಬರುವ ಮಂಗಳೂರು ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಸ್ವಾಗತಾರ್ಹ..

ಮಂಗಳೂರು ರೈಲ್ವೆ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ (ಮೈಸೂರು ವಿಭಾಗ) ವ್ಯಾಪ್ತಿಗೆ ಸೇರಿಸುವ ನಿರ್ಧಾರವು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ಹಿಂದೆ ತಾನು ರೈಲ್ವೆ ಸಲಹಾ ಸಮಿತಿ ಸದಸ್ಯನಾಗಿದ್ದ ಕಾಲದಿಂದಲೂ ಪ್ರತ್ಯೇಕ ಮಂಗಳೂರು ಡಿವಿಷನ್ ಅಥವಾ ಕರ್ನಾಟಕದ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸಂಪರ್ಕವನ್ನು ರಾಜ್ಯದ ವ್ಯಾಪ್ತಿಗೆ ತರುವುದರಿಂದ ಜನಸ್ನೇಹಿ ರೈಲು ಸೇವೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಕೇರಳದಲ್ಲಿ ಇದಕ್ಕೆ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಸಂಸದರು ಮುಂದಾಳತ್ವ ವಹಿಸಿಕೊಂಡು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article