ಸೈನ್ಸ್ ಫೋರಂ 2026-27ರ ಉದ್ಘಾಟನೆ
Friday, August 28, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ ಮತ್ತು ನವೀನ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ 2026-27ನೇ ಸಾಲಿನ ಸೈನ್ಸ್ ಫೋರಂ (ವಿಜ್ಞಾನ ವೇದಿಕೆ)ಯನ್ನು ಆ.24 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ವಿದ್ಯಾರ್ಥಿಗಳು ಭೌತಿಕವಾದಿ ಮನೋಭಾವದಿಂದ ಹೊರಬಂದು ವಿಜ್ಞಾನದ ಬಗ್ಗೆ ಆಸಕ್ತಿ, ಶಿಸ್ತು ಮತ್ತು ದೃಢಸಂಕಲ್ಪವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ, ಇಂದಿನ ವೈಜ್ಞಾನಿಕ ಪ್ರಗತಿಯ ಹಿಂದೆ ವಿಜ್ಞಾನಿಗಳ ಪರಿಶ್ರಮ ಮತ್ತು ತ್ಯಾಗವಿದ್ದು, ವಿದ್ಯಾರ್ಥಿಗಳು ಪ್ರೇರಣೆಯನ್ನು ಪಡೆದು ಇತರರಿಗೂ ಪ್ರೇರಣೆಯಾಗಬೇಕು ಎಂದು ನುಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಟಿ.ಎನ್. ಕೇಶವ ಅವರು ವಿಜ್ಞಾನದ ಬಗ್ಗೆ ನಿರಂತರ ಆಸಕ್ತಿಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಹೇಳಿ, ಅವಲೋಕನ, ಪ್ರಯೋಗ ಮತ್ತು ಅನ್ವೇಷಣೆಯ ಮೂಲಕ ವಿಜ್ಞಾನವನ್ನು ಕಲಿಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ವೈಜ್ಞಾನಿಕ ಪ್ರಗತಿಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ವಿದ್ಯಾರ್ಥಿಗಳು ಕುತೂಹಲ, ಸೃಜನಶೀಲತೆ ಮತ್ತು ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸ್ನೇಹಾ ವಾಗ್ಳೆ ಕಾರ್ಯಕ್ರಮ ನಿರೂಪಿಸಿದರು. ಮಾನಸಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನ ವೇದಿಕೆಯ ಅಧ್ಯಕ್ಷ ಮನೀಶ್ ಸ್ವಾಗತಿಸಿದರು. ವಿಜ್ಞಾನ ವೇದಿಕೆಯ ಸಂಚಾಲಕ ಡಾ. ಎಡ್ವಿನ್ ಡಿಸೋಜಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ದಿಲ್ಶಾನಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಎಡ್ವಿನ್ ಡಿಸೋಜಾ ಹಾಗೂ ಶ್ರೇರಕ್ಷಾ ಬಿ.ವಿ. ಸಂಯೋಜಿಸಿದರು.


