ಪ್ರಮುಖ 5 ಆಗ್ರಹದೊಂದಿಗೆ ಪುತ್ತೂರು ಚಲೋ
ಪುತ್ತೂರು: ಪುತ್ತೂರಿನ ದರ್ಬೆಯ ಪ್ರಕರಣದಲ್ಲಿ ಅಂಜನಾ ಪೈ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಕೊಲೆಯತ್ನದ ಪ್ರಕರಣ ದಾಖಲಿಸಬೇಕು. ಸುದರ್ಶನ್ ಪೈ ಅವರ ಮೇಲಿನ ಕೊಲೆಯತ್ನ ಪ್ರಕರಣ ಹಿಂಪಡೆಯಬೇಕು.
ನಿಯಾಜ್ ಹಾಗೂ ನೌಷಾದ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು, ಜತೆಗೆ ಸಂಘಟಿತ ಅಪರಾಧ ಪ್ರಕರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪಾತ್ರದ ಕುರಿತು ತನಿಖೆ ನಡೆಸಬೇಕು. ಸಾಮಾಜಿಕ ಸಂಘಟನೆಯ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು ಎಂಬ ಆಗ್ರಹದೊಂದಿಗೆ ಆ.31ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಚಲೋ ಜನಜಾಗೃತಿ ಆಂದೋಲನ ನಡೆಯಲಿದೆ ಎಂದು ಹಿಂಜಾವೇ ಪುತ್ತೂರು ಜಿಲ್ಲಾ ಸಂಯೋಜಕ ಮೋಹನದಾಸ ಕಾಣಿಯೂರು ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿಯಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ಹೀಗಾಗಿ ಸ್ವಾಭಿಮಾನಿ ಹಿಂದೂ ಸಮಾಜದ ಜಾಗೃತಿಗಾಗಿ ಪುತ್ತೂರು ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಸಹಯೋಗದಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ದರ್ಬೆಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಾಥಮಿಕ ತನಿಖೆಯನ್ನೂ ನಡೆಸದೆ ಏಕಾಏಕಿ ಕಾನೂನು ವಿರೋಧಿ ಕ್ರಮಗಳನ್ನು ಕೈಗೊಂಡಿದ್ದು, ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವರ ಮೇಲೆ ದುರುದ್ದೇಶದಿಂದಲೇ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ ಎಂದರು.
ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಅಂಗಡಿಯ ಬಳಿ ಜನ ಸೇರಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದು, ಇದರ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಪಾತ್ರದ ಕುರಿತು ಕೂಡ ಅನುಮಾನ ಮೂಡುತ್ತಿದೆ ಎಂದು ಅವರು ತಿಳಿಸಿದರು. ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ಮೊದಲು ಕಾರ್ಯಕರ್ತರು ದರ್ಬೆ ಬಳಿ ಸೇರಿ ಬಳಿಕ ಪುತ್ತೂರು ದೇವಸ್ಥಾನದ ಬಳಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖರಾದ ದಯಾನಂದ ಅಂಬುಲ, ಪ್ರವೀಣ್ ಕಲ್ಲೇಗ, ರೂಪೇಶ್ ಬಲ್ನಾಡು, ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.