ಉಕ್ಕಿ ಹರಿಯುತ್ತಿದ್ದ ನದಿ ಈಜಿ ವಿದ್ಯುತ್ ತಂತಿ ಜೋಡಿಸಿದ ಲೈನ್ಮ್ಯಾನ್
ಜೀವದ ಹಂಗು ತೊರೆದು ವಿದ್ಯುತ್ ಸಂಪರ್ಕ ಸರಿಪಡಿಸುವ ಮೂಲಕ ಲೈನ್‌ಮ್ಯಾನ್ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಧೂಮಡ್ಕದ ಮೂಲಕ ಹರಿಯುವ ಸೀರೆ ನದಿಯಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಮೆಸ್ಕಾಂ ಕಚೇರಿಯಲ್ಲಿ ಲೈನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಂದೇ ನವಾಜ್ ಅವರು ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸುವ ಜವಾಬ್ದಾರಿ ವಹಿಸಿಕೊಂಡರು.
ನದಿ ನೀರು ಭಾರಿ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದ್ದರೂ, ಬಲವಾದ ನೀರಿನ ಸೆಳೆತವನ್ನು ಲೆಕ್ಕಿಸದೆ ನವಾಜ್ ಅವರು ನದಿಯನ್ನು ಈಜಿ ದಾಟಿ, ತುಂಡಾಗಿದ್ದ ವಿದ್ಯುತ್ ತಂತಿಯನ್ನು ಹೊರತೆಗೆದು ಮರುಸಂಪರ್ಕಿಸಿದರು. ಇದರಿಂದ ವಿದ್ಯುತ್ ಪೂರೈಕೆಯನ್ನು ಮತ್ತೆ ಆರಂಭಿಸಲು ಸಾಧ್ಯವಾಯಿತು.
ತುಂಬಿ ಹರಿಯುತ್ತಿದ್ದ ನದಿಯನ್ನು ಲೈನ್‌ಮ್ಯಾನ್ ಈಜಿ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸೇವೆಯ ಮೇಲಿನ ಅವರ ಬದ್ಧತೆ ಹಾಗೂ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.