ಕುಕ್ಕೆ: ಆದಿ ಸುಬ್ರಹ್ಮಣ್ಯ ದೇವಳಕ್ಕೆ ಪ್ರವೇಶಿಸಿದ ನೆರೆ ನೀರು

ಕುಕ್ಕೆ: ಆದಿ ಸುಬ್ರಹ್ಮಣ್ಯ ದೇವಳಕ್ಕೆ ಪ್ರವೇಶಿಸಿದ ನೆರೆ ನೀರು


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಪರಿಸರ ಹಾಗೂ ಘಟ್ಟದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಅತ್ಯಧಿಕ ಮಳೆಯಿಂದಾಗಿ ಶ್ರೀ ದೇವಳದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಆದಿ ಸುಬ್ರಹ್ಮಣ್ಯ ದೇವಳದ ಮುಂಭಾಗ ನೆರೆ ನೀರು ಪ್ರವೇಶಿಸಿದೆ.


ರಭಸದಿಂದ ನೆರೆಯ ನೀರು ಹರಿಯುತ್ತಿದ್ದುದನ್ನು ಕಂಡ ಆದಿ ದೇವಳಕ್ಕೆ ಬಂದ ಭಕ್ತರು ಸ್ವಲ್ಪ ಸಮಯ ದೇವಳದ ಒಳಗೆ ಹಾಗೂ ಹೊರಗಿನ ವಿಸ್ತಾರ ಪ್ರದೇಶದಲ್ಲಿ ನಿಲ್ಲಬೇಕಾಯಿತು. ಹಿಂದಿನ ವರ್ಷ ಕೂಡ ಇದೇ ತರಹದ ನೆರೆ ನೀರು ಬಂದದನ್ನು ಇಲ್ಲಿಯ ಸ್ಥಳೀಯರು ಪುನರುಚಿಸಿದ್ದಾರೆ. ಈ ವರ್ಷದ ಮಳೆಗಾಲದಲ್ಲಿ ಇಷ್ಟು ಪ್ರಮಾಣದ ನೀರು ದರ್ಪಣ ತೀರ್ಥ ನದಿಯಲ್ಲಿ ಹರಿದು ಬಂದದ್ದು ಇದೇ ಪ್ರಥಮ.


ನಿರಂತರವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಬೈಪಾಸ್ ಮುಖ್ಯರಸ್ತೆಯಲ್ಲಿ ನೆರೆ ನೀರು ಮಾರ್ಗದಲ್ಲಿ ಶೇಖರಣೆಗೊಂಡು ವಾಹನಗಳು ಸಂಚಾರದಲ್ಲಿ ಹರಸಾಹಸ ಪಡಬೇಕಾಯಿತು. ಬೈಪಾಸ್ ರಸ್ತೆಯ ಇಕ್ಕೆಲೆಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿದ್ದೂದೆ ನೆರೆ ನೀರು ಮಾರ್ಗದಲ್ಲಿ ನಿಲ್ಲಲು ಕಾರಣವಾಗಿದೆ. ಆದರೆ ಕುಮಾರಧಾರ ನದಿಯಲ್ಲಿ ಅಷ್ಟು ಪ್ರಮಾಣದ ನೀರು ಹರಿದು ಬರದಿದ್ದುದರಿಂದ ಸ್ನಾನಘಟ್ಟ ಮುಳುಗಡೆಯಾಗಿಲ್ಲ. 

ಇಂದು ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಿಸಿದ್ದರಿಂದ ಬಹಳಷ್ಟು ಭಕ್ತರು ಶ್ರೀ ದೇವರ ದರ್ಶನಕ್ಕೆ ಕುಕ್ಕೆಗೆ ಆಗಮಿಸಿದ್ದರು. ಶ್ರೀ ದೇವಳದ ವತಿಯಿಂದ ಭಕ್ತರ ದರ್ಶನಕ್ಕೆ ತೀರ್ಥ ಪ್ರಸಾದ ವ್ಯವಸ್ಥೆ ಹಾಗೂ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನಕ್ಕೆ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ದೇವಳದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಭದ್ರತಾ ಸಿಬ್ಬಂದಿಯವರು ಭಕ್ತರ ಸುಗಮ ದರ್ಶನ ಹಾಗೂ ಪ್ರಸಾದಕ್ಕಾಗಿ ವ್ಯವಸ್ಥೆಗೊಳಿಸಿದ್ದರು .

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article