ಸಕಲೇಶಪುರ-ಸುಬ್ರಹ್ಮಣ್ಯ ರೋಡ್: ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪರಿಶೀಲನೆ

ಸಕಲೇಶಪುರ-ಸುಬ್ರಹ್ಮಣ್ಯ ರೋಡ್: ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪರಿಶೀಲನೆ


ಸುಬ್ರಹ್ಮಣ್ಯ: ನೈಋತ್ಯ ರೈಲ್ವೇಯ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಮಂಗಳವಾರ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಪರಿಶೀಲಿಸಿ, ವಿವಿಧ ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯಗಳ ಕಾಮಗಾರಿಗಳ ಪ್ರಗತಿಯನ್ನು ಅವಲೋಕಿಸಿದರು.

ಪಶ್ಚಿಮ ಘಟ್ಟಗಳ ಮೂಲಕ ಹಾದು ಹೋಗುವ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ವಿಭಾಗವು ಇಳಿಜಾರು, ಸುರಂಗ, ಸೇತುವೆ ಹಾಗೂ ತಿರುವುಗಳನ್ನು ಒಳಗೊಂಡಿರುವ ತಾಂತ್ರಿಕವಾಗಿ ಸವಾಲಿನ ಮಾರ್ಗವಾಗಿದೆ. ಪರಿಶೀಲನೆ ವೇಳೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಮತ್ತು ಸುರಕ್ಷ ಅಂಶಗಳನ್ನು ಪರಿಶೀಲಿಸಿದ ಪ್ರಧಾನ ವ್ಯವಸ್ಥಾಪಕರು, ವಿಭಾಗದಲ್ಲಿನ ರೈಲ್ವೇ ಮೂಲಸೌಕರ್ಯದ ಸಿದ್ಧತೆಯನ್ನೂ ಅವಲೋಕಿಸಿದರು.

ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಡೆಯು ತ್ತಿರುವ ಕಾಮಗಾರಿಗಳನ್ನೂ ಅವರು ಪರಿಶೀಲಿ ಸಿದರು. ನಿಲ್ದಾಣಗಳ ಪುನರಾಭಿವೃದ್ಧಿ, ಪ್ರಯಾಣಿಕರ ಹಾಗೂ ಪ್ಲಾಟ್ಫಾರ್ಮ್ ಸೌಲಭ್ಯಗಳು, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಮತ್ತು ಇತರ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಸುರಕ್ಷೆ, ಗುಣಮಟ್ಟ ಹಾಗೂ ಪ್ರಯಾಣಿಕರ ಅನುಕೂಲತೆಗೆ ಆದ್ಯತೆ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದರು. ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದರೊಂದಿಗೆ ಸಂಬಂಧಿಸಿದ ವಿಭಾಗಗಳ ನಡುವೆ ಸಮ ನ್ವಯ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಧಿಕಾರಿಗಳು ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ವಿಭಾಗದ ಕಾರ್ಯಾಚರಣೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಅಗತ್ಯಗಳ ಕುರಿತು ಪ್ರಧಾನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article