ಕಾಡಾನೆ ಹಾವಳಿ ಕುರಿತು ಅರಣ್ಯ ಇಲಾಖೆ ಮತ್ತು ಕೃಷಿಕರ ಸಂವಾದ: ಆನೆ ಹಾವಳಿ ಗಣನೀಯವಾಗಿ ಕಡಿಮೆ ಮಾಡಲು ಪ್ರಯತ್ನ: ಅರಣ್ಯ ಇಲಾಖೆ ಭರವಸೆ
ಸುಳ್ಯ ತಾಲೂಕಿನಲ್ಲಿ 22-23 ಗ್ರಾಮಗಳಲ್ಲಿ ಆನೆ ಹಾವಳಿ ತೀವ್ರಗೊಂಡಿದ್ದು ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದರು. ಆನೆ ಹಾವಳಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಎಲ್ಲಾ ಪ್ರಯತ್ನವನ್ನು ನಡೆಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರೆ, ಆನೆ ಹಾವಳಿಯ ಪ್ರದೇಶದಲ್ಲಿ ಸಂಪೂರ್ಣ ಸರಕಾರದ ವೆಚ್ಚದಲ್ಲಿ ಸೋಲಾರ್ ಬೇಲಿ ನಿರ್ಮಿಸಬೇಕು ಎಂದು ವಿಧಾನಸಭೆಯ ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಆನೆ ಹಾವಳಿಯಿಂದ ಆದ ಕೃಷಿ ಹಾನಿಗೆ ನೀಡುವ ಪರಿಹಾರ ಅತಿ ಕಡಿಮೆ ಇದೆ ಇದನ್ನು ಹೆಚ್ಚಿಸಿ ಗರಿಷ್ಠ ಪರಿಹಾರ ಒದಗಿಸಬೇಕು, ಆನೆ ದಾಳಿಯಿಂದ ಪ್ರಾಣ ಹಾನಿ ಸಂಭವಿಸಿದರೆ ಕುಟುಂಬಕ್ಕೆ ಪರಿಹಾರದ ಜೊತೆಗೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು, ನಾಡಿನಲ್ಲಿ ದಾಳಿ ಮಾಡುವ ಆನೆಗಳನ್ನು ಹಿಡಿದು ಆನೆ ಶಿಬಿರ ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರ ಮಾಡಬೇಕು, ಕಾಡಿನಲ್ಲಿ ಕಾಡಾನೆಗಳಿಗೆ ಮತ್ತು ಇತರ ವನ್ಯ ಪ್ರಾಣಿಗಳಿಗೆ ಆಹಾರದ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು,ಸೋಲಾರ್ ಬೇಲಿ ನಿರ್ಮಾಣಕ್ಕೆ ಇರುವ ಶೇ.50ನ್ನು ಶೇ.90ಕ್ಕೆ ಏರಿಸಬೇಕು, ಆನೆ ಕಂದಕಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು, ನಿರ್ಮಾಣ ಮಾಡಿದ ಕಂದಕಗಳನ್ನು ಅಭಿಪ್ರಾಯಗಳು ದುರಸ್ತಿ ಮಾಡಬೇಕು, ಕಾಂಕ್ರೀಟ್ ಸ್ಟ್ರಕ್ಚರ್, ತೂಗುವ ಬೇಲಿಗಳನ್ನು ನಿರ್ಮಿಸಬೇಕು ಇತ್ಯಾದಿ ಪ್ರಮುಖ ಬೇಡಿಕೆಗಳನ್ನು ಸಂವಾದದಲ್ಲಿ ಮಾತನಾಡಿದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಳ್ಯವನ್ನು ಅತ್ಯಂತ ಹೆಚ್ಚು ಆನೆ ಪೀಡಿತ ಪ್ರದೇಶ ಎಂದು ಸರಕಾರಕ್ಕೆ ಮನವರಿಕೆ ಮಾಡಬೇಕು, ಅದಕ್ಕಾಗಿ ಸಮಗ್ರ ವರದಿಯನ್ನು ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಸಂವಾದಕ್ಕೆ ಉತ್ತರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ಕಾಡಾನೆ ಹಾವಳಿಯನ್ನು ತಡೆಗಟ್ಟಲು ಇಲಾಖೆ ವತಿಯಿಂದ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಆನೆ ದಾಳಿಯಿಂದ ಆದ ನಷ್ಟಕ್ಕೆ ಪರಿಹಾರ ಹೆಚ್ಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ, ಸೋಲಾರ್ ಬೇಲಿ ನಿರ್ಮಾಣದ ಸಬ್ಸಿಡಿ ಹೆಚ್ಚಳ ಕುರಿತು ಬೇಡಿಕೆ ಸಲ್ಲಿಸಲಾಗುವುದು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಆನೆ ಹಾವಳಿ ಬಗ್ಗೆ ಮತ್ತು ಆನೆ ಹಾವಳಿ ಬಾದಿತ ಪ್ರದೇಶದಲ್ಲಿ ಸಂಪೂರ್ಣ ಸರಕಾರದ ವತಿಯಿಂದಲೇ ಬೇಲಿ ನಿರ್ಮಾಣ ಮಾಡುವ ಬೇಡಿಕೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ಕೇಶವ ಅಡ್ತಲೆ, ಕೆ.ಪಿ. ಜಗದೀಶ್, ಪ್ರಭಾಕರ ರೈ,ಅಶೋಕ್ ಪೀಚೆ, ರಾಜೇಶ್ ಭಟ್ ನೆಕ್ಕಿಲ, ಶಶಿಧರ ಎಂ.ಜೆ, ರತ್ನಾಕರ ಬಳ್ಳಡ್ಕ, ಸತೀಶ್ ದಾಸರಬೈಲು ಮತ್ತಿತರರು ಆನೆ ಹಾವಳಿಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಾಗೂ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ಕೃಷಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಎಲ್ಲಾ ಕೃಷಿಕರು ತಮ್ಮ ತೋಟದ ಸುತ್ತ ಸೋಲಾರ್ ಬೇಲಿ ನಿರ್ಮಾಣ ಮಾಡಿದರೆ ಆನೆ ದಾಳಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಎನ್. ಮಂಜುನಾಥ್ ಹೇಳಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ., ಡಾ. ಅವಿನಾಶ್, ವಲಯ ಅರಣ್ಯಾಧಿಕಾರಿಗಳಾದ ನಿರಂಜನ್ ಶೆಟ್ಟಿ, ಕಿರಣ್ ಬಿ.ಎಂ., ಸಂಧ್ಯಾ, ಚೇತನ್ ಮತ್ತಿತರರು ಉಪಸ್ಥಿತರಿದ್ದರು.