ಮಳೆಮಾಪನ ಸರಿ ಇಲ್ಲದೆ ಬೆಳೆ ವಿಮೆಯಲ್ಲಿ ಅನ್ಯಾಯ:  ಅಧಿಕಾರಿಗಳ ವಿರುದ್ಧ ಸಚಿವ ಗರಂ

ಮಳೆಮಾಪನ ಸರಿ ಇಲ್ಲದೆ ಬೆಳೆ ವಿಮೆಯಲ್ಲಿ ಅನ್ಯಾಯ: ಅಧಿಕಾರಿಗಳ ವಿರುದ್ಧ ಸಚಿವ ಗರಂ


ಸುಳ್ಯ: ಮಳೆ ಮಾಪನ ಸರಿ ಇಲ್ಲದೆ ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯ ಆಗುವುದರ ಬಗ್ಗೆ ಮತ್ತು ಸುಳ್ಯ ತಾಲೂಕಿನಲ್ಲಿ ಮಳೆ ಮಾಪನ ಸರಿ ಮಾಡದ ಕುರಿತು ಅಧಿಕಾರಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ತೀವ್ರ ತರಾಟೆಗೆತ್ತಿಕೊಂಡ ಘಟನೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ  ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆಯಲ್ಲಿ ನಡೆಯಿತು. 

ಸಚಿವರ ನೇತೃತ್ವದಲ್ಲಿ ಮಳೆ ಹಾನಿ ಬಗ್ಗೆ, ಪ್ರಾಕೃತಿಕ ವಿಕೋಪ ಮುಂಜಾಗ್ರತ ಕ್ರಮ, ಪೂರ್ವಭಾವಿ ಸಿದ್ಧತೆ ಹಾಗೂ ಮಾನ್ಸೂನ್ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಸುಳ್ಯ ತಾಲೂಕಿನಲ್ಲಿ ಮಳೆ ಮಾಪನ ಸರಿ ಇಲ್ಲದೆ ಬೆಳೆ ವಿಮೆ ದೊರಕುವುದರಲ್ಲಿ ರೈತರಿಗೆ ಅನ್ಯಾಯ ಆಗುತಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ  ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ತಾಲೂಕಿನ ಬಹುತೇಕ ಪಂಚಾಯತ್‌ಗಳಲ್ಲಿ ಮಳೆ ಮಾಪನ ಸರಿ ಇಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಈ ಬಗ್ಗೆ ಚರ್ಚೆ ನಡೆದಾಗ ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.ತಾಲೂಕಿನ ಎಲ್ಲಾ ಮಳೆ ಮಾಪನಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಿರು.

ಸುಳ್ಯ ತಾಲೂಕಿನಲ್ಲಿ ಶೇ.12 ಮಳೆ ಕೊರತೆ ಎದುರಾಗಿದೆ. ಮಳೆ ಕೊರತೆ ಎದುರಾಗಿದರೆ ಅಂತರ್ಜಲ ಕುಸಿದು ಕೃಷಿಗೆ ಸಮಸ್ಯೆ ಎದುರಾಗಬಹುದು, ಸದ್ಯ ಕೃಷಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ, ಮಳೆಯಿಂದ 17 ಮನೆಗಳಿಗೆ ಭಾಗಷಃ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಮಳೆಯಿಂದ ಯಾವುದೇ ಹಾನಿ ಸಂಭವಿಸಿದರೆ ಕೂಡಲೇ ಪರಿಹಾರ ವಿತರಣೆ ಮಾಡಬೇಕು ಎಂದು ಸಚಿವರು ಸೂಚಿಸಿದರು. ಶಾಲೆ, ಅಂಗನವಾಡಿ ಕಟ್ಟಡಗಳು ನಾದುರಸ್ತಿಯಲ್ಲಿದ್ದರೆ ಕೂಡಲೇ ವರದಿ ಸಲ್ಲಿಸಿ, ದುರಸ್ತಿಗೆ ಕ್ರಮ ಕೈಗೊಳ್ಳಬೇಕು,ಪೈಪ್ ಲೈನ್ ಅಳವಡಿಕೆಯಿಂದ ರಸ್ತೆ ಕಡಿದು ಸರಿಪಡಿಸದ ಬಗ್ಗೆ, ಚರಂಡಿ ಸರಿಪಡಿಸದ ಸಾರ್ವಜನಿಕ ದೂರಿನ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ಸರಿಯಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು. ಚರಂಡಿ, ರಸ್ತೆಗಳನ್ನು ಸುಸ್ತಿತಿಯಲ್ಲಿಡಬೇಕು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಬುದ್ದಿಯಿಂದ ಮಾತ್ರವಲ್ಲ, ಹೃದಯದಿಂದ ಕೆಲಸ ಮಾಡಬೇಕು ಎಂದು ಹೇಳಿದ ಸಚಿವರು ಒಮ್ಮೆ ಸಮಸ್ಯೆ ಕಂಡು ಬಂದರೆ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಸಮಸ್ಯೆ  ಮರುಕಳಿಸಬಾರದು ಎಂದು ಹೇಳಿದರು. ತಾಲೂಕಿನ ಇಲಾಖೆಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಬದಲಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ  ಹೇಳಿದರು. ಗ್ರಾಮ ಪಂಚಾಯತ್‌ಗಳ ಅನುದಾನವನ್ನು ಸದ್ಯ ಸಾರ್ವಜನಿಕ ಅಗತ್ಯಕ್ಕೆ ಮಾತ್ರ ಬಳಸಬೇಕು ಎಂದು ಸೂಚಿಸಿದ ಸಚಿವರು, ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಮುಂಭಾಗವನ್ನು ಆಕರ್ಷಕವಾಗಿ ನವೀಕರಿಸಲು ಅನುದಾನ ನೀಡಲಾಗುವುದು ಎಂದು ಸಚಿವರು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ, ಎಸ್‌ಪಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article