ಮಟ್ಕಾ: ಬುಕ್ಕಿ ಸಹಿತ ಐವರ ಬಂಧನ
ಉಡುಪಿ: ಜಿಲ್ಲೆಯಲ್ಲಿ ಮಟ್ಕಾ ಜುಗಾರಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು ಮೂರು ಪ್ರಕರಣಗಳಲ್ಲಿ ನಾಲ್ಕು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಓರ್ವ ಮಟ್ಕಾ ಬುಕ್ಕಿಯನ್ನು ಬಂಧಿಸಲಾಗಿದೆ.
ಕಾರ್ಕಳದ ಸಾರ್ವಜನಿಕ ಬಸ್ ಸ್ಟಾಂಡ್ ಬಳಿ ಇರುವ ಅಂಗಡಿಯೊಂದರಲ್ಲಿ 1 ರೂಪಾಯಿಗೆ 70 ರೂ. ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹ ಮಾಡುತ್ತಿದ್ದ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ವೀರೇಂದ್ರ ಶೆಟ್ಟಿ (42) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ 1,415 ರೂ ಹಣ, ಮಟ್ಕಾ ಸಂಖ್ಯೆ ಬರೆದ ಚೀಟಿ ಮತ್ತು ಒಂದು ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದೆ. ಆ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂದಾಡಿ ಗ್ರಾಮದ ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ 00 ರಿಂದ 99 ರ ಒಳಗಿನ ನಂಬರ್‌ಗೆ 1 ರೂಪಾಯಿಗೆ 70 ರೂ. ನೀಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕುಶಾಲ್ ಶೆಟ್ಟಿ (66) ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಆತನಿಂದ ಮಟ್ಕಾ ಚೀಟಿ 1, ಬಾಲ್‌ಪೆನ್ 1 ಹಾಗೂ 2,395 ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಂತಾರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರಶೇಖರ ಶೆಟ್ಟಿ ಎಂಬಾತ ಮಟ್ಕಾ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸಿದ್ದಾಗ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಆತನ ವಿಚಾರಣೆ ವೇಳೆ ತಾನು ಸಂಗ್ರಹಿಸಿದ ಹಣವನ್ನು ಆರೋಪಿ ಕೊರ್ಗಿ ಗ್ರಾಮದ ರತ್ನಾಕರ ಶೆಟ್ಟಿ ಎಂಬಾತನಿಗೆ ನೀಡಿ, ಆತ ಸೂಚಿಸಿದ ಲಕ್ಕಿ ನಂಬರ್ ಆಧಾರದ ಮೇಲೆ ಜುಗಾರಿ ನಡೆಸುತ್ತಿರುವ ಮಾಹಿತಿ ನೀಡಿದ್ದು, ಆರೋಪಿಯಿಂದ ಮಟ್ಕಾ ಚೀಟಿ 1, ಬಾಲ್‌ಪೆನ್ 1 ಹಾಗೂ 1,400 ರೂ. ನಗದು ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ಆರೋಪಿಗಳ ಮಾಹಿತಿ ಮೇರೆಗೆ ಮಟ್ಕಾ ಬುಕ್ಕಿ ಉಡುಪಿ ಶಿವಳ್ಳಿ ಗ್ರಾಮದ ಲಿಯೊ ಕರ್ನೇಲಿಯೊ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.