ತಾಂತ್ರಿಕತೆಯ ಜವಾಬ್ದಾರಿಯುತ ಅನ್ವಯದಿಂದ ಮಾಧ್ಯಮ ಪಾರದರ್ಶಕತೆ ಸುಸ್ಥಿರ: ಪೂರನ್ ವರ್ಮ
ಉಜರೆ ಎಸ್‌ಡಿಎಂ ಸ್ನಾತಕೋತ್ತರ ಎಂಸಿಜೆ ವಿಭಾಗದ ‘ಮೀಡಿಯಾ ಮೆಸೆಂಜರ್ ಕ್ಲಬ್’ಗೆ ಚಾಲನೆ
ಅವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನೂತನ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಕಾರ್ಯಕ್ರಮದಲ್ಲಿ ‘ಮೀಡಿಯಾ ಮೆಸೆಂಜರ್ ಕ್ಲಬ್’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು, ಮುಖ್ಯವಾಗಿ ಇನ್ಸ್ಟಾಗ್ರಾಂ ತನ್ನ ಆಕರ್ಷಣೀಯ ಆಲ್ಗರಿದಂನಿಂದಾಗಿ ಹೆಚ್ಚಿನ ಗಮನ ಸೆಳೆಯುತ್ತಿದೆ. ನಿಖರತೆಯಿಲ್ಲದ ಮಾಹಿತಿಯನ್ನು ರೋಚಕವಾಗಿ ತಲುಪಿಸಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಇದರೊಂದಿಗೆ ಎಐ ತಂತ್ರಜ್ಞಾನವೂ ವೇಗವಾಗಿ ಬೆಳೆಯುತ್ತಿದ್ದು, ಸುಳ್ಳು ಮಾಹಿತಿಗಳೇ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ನಿಖರತೆಯ ಮೌಲಿಕ ಬದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ನುಡಿದರು.
ಹಿಂದೆ ಕ್ಷಣಾರ್ಧದಲ್ಲಿ ಮಾಹಿತಿಗಳು ಲಭ್ಯವಾಗುತ್ತಿರಲಿಲ್ಲ, ಆದರೆ ಇಂದು ವಿವಿಧ ಮೂಲಗಳಿಂದ ಹೇರಳವಾದ ಮಾಹಿತಿ ತಕ್ಷಣ ಲಭ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಹರಿಬಿಟ್ಟು ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಜರ್ನಲಿಸ್ಟಿಕ್ ಆಯಾಮ ಹಾಗೂ ಗುಣಾತ್ಮಕತೆ ಗೈರಾಗುತ್ತಿದೆ. ಮಾಧ್ಯಮಗಳಲ್ಲಿ ವ್ಯಕ್ತವಾಗುವ ಟೀಕೆಗಳು ಕೇವಲ ವಿರೋಧಿಸುವುದಕ್ಕಾಗಿ ಇರಬಾರದು; ಸರಿ ಹಾದಿಯ ನಿರೀಕ್ಷೆಯೊಂದಿಗಿನ ಜವಾಬ್ದಾರಿಯುತ ದೃಷ್ಟಿಕೋನ ಹೊಂದಿರಬೇಕು ಎಂದು ಅವರು ತಿಳಿಸಿದರು.
ಸಮಾಜದಲ್ಲಿ ತಮ್ಮ ಪಾಡಿಗೆ ಕಾರ್ಯೋನ್ಮುಖರಾಗಿ ಮಾದರಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಕೊಡುಗೆಗಳನ್ನು ದಾಖಲಿಸುವ ಕೆಲಸವನ್ನು ವಿದ್ಯಾರ್ಥಿಗಳು ಶಿಕ್ಷಣದ ಹಂತದಲ್ಲೇ ಆರಂಭಿಸಬೇಕು. ನಿಖರ ಸಂವಹನ, ಪರಿಸ್ಥಿತಿ ನಿರ್ವಹಣೆಯ ಚಾಕಚಕ್ಯತೆ ಮತ್ತು ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ಬೆಳೆಸಿಕೊಂಡಾಗ ಮಾತ್ರ ವಿಶ್ವಾಸಾರ್ಹ ವೃತ್ತಿಪರರಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿ, ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಮಾತನಾಡಿ, 2008ರಿಂದ ವಿಭಾಗವು ಬೆಳೆದುಬಂದ ಹಾದಿಯನ್ನು ಮೆಲುಕುಹಾಕಿದರು. ಜ್ಞಾನ ಮತ್ತು ಕೌಶಲಗಳನ್ನು ಅನ್ವಯಿಸಿಕೊಂಡು ಸಾಧಿಸುವ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯೇ ವಿಭಾಗದ ಯಶಸ್ಸಿಗೆ ಕಾರಣ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬರಹಗಳನ್ನೊಳಗೊಂಡ ‘ಹೊಂಗಿರಣ’ ಕೃತಿ ಹಾಗೂ ‘ಎಸ್.ಡಿ.ಎಂ ಗೆಜೆಟ್’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ. ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ. ಹಂಪೇಶ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜನಾ ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ಆಚಾರ್ ವಂದಿಸಿದರು.