ಹಜ್, ಉಮ್ರಾಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೆ ವಿಶೇಷ ಕಾನೂನು ಜಾರಿ: ಯು.ಟಿ. ಖಾದರ್

ಹಜ್, ಉಮ್ರಾಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೆ ವಿಶೇಷ ಕಾನೂನು ಜಾರಿ: ಯು.ಟಿ. ಖಾದರ್


ಉಳ್ಳಾಲ: ಹಜ್, ಉಮ್ರಾ ವ್ಯವಸ್ಥೆ ಮಾಡುವ ಖಾಸಗಿ ಸಂಸ್ಥೆಗಳು ಯಾತ್ರಾರ್ಥಿಗಳನ್ನು ಅರ್ಧದಾರಿಯಲ್ಲಿ ಬಿಟ್ಟು ಬಂದಿರುವ ಬಗ್ಗೆ ಆರೋಪಗಳು ಬಹಳಷ್ಟು ಇವೆ. ಈ ಹಿನ್ನೆಲೆಯಲ್ಲಿ ಹಜ್, ಉರ್ಮಾ ನಿರ್ವಾಹಕ ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿ ವಿಶೇಷ ಕಾನೂನು ಜಾರಿ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಮೀಲಾದುನ್ನಬಿ ಪ್ರಯುಕ್ತ ಉಳ್ಳಾಲ ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾಗಳ ವ್ಯಾಪ್ತಿಯ 34 ಮದ್ರಸ ವಿದ್ಯಾರ್ಥಿಗಳನ್ನು ಒಳಗೊಂಡ ಮೀಲಾದ್ ಕಾಲ್ನಡಿಗೆ ಜಾಥಾಕ್ಕೆ ಕೋಟೆಪುರದಲ್ಲಿ ಚಾಲನೆ ನೀಡಿ ಮಾತನಾಡಿದರು.

ಈ ಬಾರಿ 11 ಸಾವಿರ ಮಂದಿ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಿದ್ದಾರೆ. ಹಜ್ ಜೊತೆ ಉಮ್ರಾವನ್ನು ಹಜ್ ಕಮಿಟಿಯ ಅಧೀನದಲ್ಲಿ ವ್ಯವಸ್ಥೆ ಮಾಡಲಾಗುವುದು. ಯಾತ್ರಾರ್ಥಿಗಳ ಮಾಹಿತಿ ಪಡೆಯಲು ವೆಬ್ ಪೋರ್ಟಲ್ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ ಹಜ್ ಭವನ ನಿರ್ಮಾಣಗೊಂಡಿದ್ದು, ಬೆಂಗಳೂರು ಮೂಲಕ ಹಜ್ ಯಾತ್ರೆ ತೆರಳುವವರಿಗೆ ಈ ಭವನದಲ್ಲೇ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಬಜ್ಜೆಯಲ್ಲಿ ಹಜ್ ಭವನ ನಿರ್ಮಾಣ ಆಗಲಿದ್ದು, ಇಲ್ಲಿನ ಹಜ್ ಯಾತ್ರಾರ್ಥಿಗಳಿಗೆ ಮಂಗಳೂರಿನಿಂದ ನೇರ ಹಜ್‌ಗೆ ತೆರಳುವ ವ್ಯವಸ್ಥೆ ಶೀಘ್ರ ಮಾಡಲಾಗುವುದು ಎಂದು ಖಾದರ್ ಭರವಸೆ ನೀಡಿದರು.

ಪ್ರವಾದಿ ಜನ್ಮದಿನವಾದ ಇಂದು ನಾವು ಮೀಲಾದುನ್ನಬಿ ಆಚರಣೆಯ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಯು.ಟಿ.ಖಾದರ್ ಕರೆ ನೀಡಿದರು.

ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ ಅಬ್ದುಲ್ ಖಾದರ್ ಕೋಡಿ, ಕಾರ್ಯದರ್ಶಿ ಮುಸ್ತಫ ಮದನಿ ನಗರ, ಕಣಚೂರು ಮೋನು, ಕೋಟೆಪುರ ಮಸೀದಿಯ ಅಧ್ಯಕ್ಷ ಫಾರೂಕ್ ಅಬ್ಬಾಸ್ ಕೋಟೆಪುರ, ಅಬ್ಬಾಸ್ ಕೋಟೆಪುರ, ಮದನಿ ಕಾಲೇಜು ಅಹ್ಮದ್ ಕುಟ್ಟಿ ಮುಸ್ಲಿಯಾರ್, ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ದರ್ಗಾ ಅಧೀನದ 27 ಮೊಹಲ್ಲಾಗಳ ವ್ಯಾಪ್ತಿಯ 34 ಮದ್ರಸ, ಮಸೀದಿಗಳ ಖತೀಬರು ಮುಅಲ್ಲಿಂಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಟೆಪುರ ಮಸೀದಿ ಖತೀಬ್ ಇರ್ಷಾದ್ ಸಖಾಫಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article