ಮಟ್ಕಾ ದಂಧೆ ನಿರತ ಇಬ್ಬರ ಬಂಧನ
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಪತ್ರಿಕಾ ಏಜೆಂಟ್ ಓರ್ವರ ಅಂಗಡಿಗೆ ಖಚಿತ ಮಾಹಿತಿ ಮೇರೆಗೆ ಜು.30 ರಂದು ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಟ್ಕಾ ದಂಧೆಯಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಉರುವಾಲು ಗ್ರಾಮದ ಕಾರ್ಯತಡ್ಕ ನಿವಾಸಿ ಉಮೇಶ್ ಪೂಜಾರಿ (45), ಕೋಡಿಂಬಾಡಿ ಗ್ರಾಮದ ಶಾಂತಿನಗರದ ಕಿನ್ನಿತ್ತಪಲ್ಕೆ ನಿವಾಸಿ ಸತ್ಯನಾರಾಯಣ ಪ್ರಸಾದ್ (49) ಬಂಧಿತ ಆರೋಪಿಗಳು. ಸ್ಥಳದಿಂದ 1,130 ರೂ. ನಗದು ಮತ್ತು ಮಟ್ಕಾ ಸಂಖ್ಯೆ ಬರೆದಿಟ್ಟುಕೊಂಡ 5 ಚೀಟಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಇಬ್ಬರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಉಪ್ಪಿನಂಗಡಿಯಲ್ಲಿ ಕೇರಳ ರಾಜ್ಯದ ಬಂಪರ್ ಬಹುಮಾನದ ಲಾಟರಿಯ ಅಂಕೆಗಳ ಆಧಾರದ ಮೇಲೆ ಈ ದಂಧೆ ನಡೆಯುತ್ತಿದ್ದ ಪತ್ರಿಕಾ ಏಜೆಂಟ್ ಒಬ್ಬರ ಅಂಗಡಿಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಈ ದಂಧೆಯ ಮುಖ್ಯ ರೂವಾರಿಯೆನ್ನಲಾದ ವೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೀಜದಡಿ ಮನೆಯ ಜಯಂತ ಹಾಗೂ ಪತ್ರಿಕಾ ಏಜೆಂಟ್ ಅಂಗಡಿಯ ಮಾಲಕ ಉಪ್ಪಿನಂಗಡಿ ನಿವಾಸಿ ಸತೀಶ್ ಕಾಮತ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.