ಮುಳುಗುತ್ತಿದ್ದ ಮೂವರನ್ನು ರಕ್ಷಿಸಿ ಆಪದ್ಬಾಂಧವರಾದ ಮಹೇಶ್ ಗೌಡ
Saturday, August 8, 2026
ವಿಟ್ಲ: ಇತ್ತೀಚೆಗೆ ನಮ್ಮ ಕಡಂಬು ಬನ ನಿವಾಸಿ ಮಹೇಶ್ ಗೌಡರ ಸಾಹಸವಲ್ಲದಿದ್ದರೆ ಭಾರೀ ದುರಂತವೊಂದು ವಿಟ್ಲದ ಕೋಟಿಕೆರೆಯಲ್ಲಿ ಸಂಭವಿಸುತ್ತಿತ್ತು. ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಡುತ್ತಿದ್ದರು.
ಅಂದು ಜು.14, ಕೆಲಿಂಜದ ಮೂವರು ಮತ್ತು ಬೈರಿಕಟ್ಟೆ ಓರ್ವ ಬಾಲಕ ವಿಟ್ಲದ ಕೋಟಿಕೆರೆಗೆ ಈಜಲು ಬಂದಿದ್ದರು. ಸರಿಯಾಗಿ ಈಜು ಬಾರದಿದ್ದರೂ ಈ ಪೈಕಿ ಮೂವರು ಕೋಟಿಕೆರೆಗೆ ಸ್ನಾನಕ್ಕಿಳಿದಿದ್ದಾರೆ. ಕೆರೆಯ ಆಳದ ಬಗ್ಗೆ ಅರಿವಿಲ್ಲದ ಅವರು ಮುಳುಗಲಾರಂಭಿಸಿದ್ದಾರೆ. ಈ ವೇಳೆ ದಡದಲ್ಲಿದ್ದ ಇನ್ನೋರ್ವ ಬಾಲಕ ಬೊಬ್ಬೆ ಹಾಕಿದ್ದಾನೆ. ಇದೇ ವೇಳೆ ಕೋಟೆಕೆರೆಗೆ ಈಜಲೆಂದು ತೆರಳುತ್ತಿದ್ದ ಮಹೇಶ್ ಅವರು ಮಕ್ಕಳ ಬೊಬ್ಬೆ ಕೇಳಿ ತಕ್ಷಣ ಕೆರೆಗೆ ಹಾರಿ ಮುಳುಗುತ್ತಿದ್ದ ಮೂವರನ್ನು ಜೀವ ಪಣಕ್ಕಿಟ್ಟು ರಕ್ಷಿಸಿದ್ದಾರೆ.
ಕೋಟಿಕೆರೆ ವಿಟ್ಲದ ಐತಿಹಾಸಿಕ ಹಾಗೂ ಪ್ರಮುಖ ಜಲಮೂಲವಾಗಿದೆ. ಇದು ಸ್ಥಳೀಯ ಈಜುಪ್ರಿಯರಿಗೆ ನೆಚ್ಚಿನ ಸ್ವಿಮ್ಮಿಂಗ್ ಪೂಲ್ ಆಗಿದೆ. ವಾರಾಂತ್ಯದಲ್ಲಿ ಇಲ್ಲಿ ಈಜಲು ಹಲವಾರು ಮಂದಿ ಆಗಮಿಸುತ್ತಾರೆ. ಆ ರೀತಿ ಈಜಲು ತೆರಳುವವರಲ್ಲಿ ಮಹೇಶ್ ಕೂಡಾ ಒಬ್ಬರಾಗಿದ್ದಾರೆ.
ಮಹೇಶ್ ಅವರ ಸಕಾಲಿಕ ಪ್ರಯತ್ನ, ಸಾಹಸವು ಮೂವರು ಮಕ್ಕಳ ಜೀವ ಉಳಿಸಿದೆ.