ತೆರೆದ ಬಾವಿಗೆ ಬಿದ್ದ ಚಿರತೆ: ರಕ್ಷಣೆ
ಸುಮಾರು 30 ಅಡಿ ಆಳವಿರುವ ಬಾವಿಯಲ್ಲಿ ಸುಮಾರು ೬ ಅಡಿ ನೀರಿದ್ದು, ಆಹಾರ ಅರಸಿ ಸಂಚರಿಸುತ್ತಿದ್ದ ವೇಳೆ ಚಿರತೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿತ್ತು. ಈ ವಿಚಾರ ಸೋಮವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಕುಂದಾಪುರ ವಿಭಾಗದ ಡಿಎಫ್‌ಒ ರುತ್ರನ್ ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಂ ಅವರ ಮಾರ್ಗದರ್ಶನದಲ್ಲಿ ವೇಣೂರು ಆರ್‌ಎಫ್‌ಒ ಭರತ್, ಡಿಆರ್‌ಎಫ್‌ಒ ಅಶ್ವಿತ್, ಅರಣ್ಯ ರಕ್ಷಕ ದಿವಾಕರ, ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದರು. ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ಸಂಜೆ 4.30ರ ಹೊತ್ತಿಗೆ ಕೊನೆಗೊಂಡಿತು. ವನ್ಯಜೀವಿ ರಕ್ಷಣಾ ಬಲೆ ಹಾಗೂ ಚಿರತೆ ರಕ್ಷಣಾ ಬೋನಿನ ನೆರವಿನಿಂದ ಚಿರತೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಲಾಯಿತು. ಬಳಿಕ ಚಿರತೆಯನ್ನು ಹಿರಿಯ ಅಧಿಕಾರಿಗಳ ಸೂಚನೆಯಂತೆ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ವೆಟರ್ನರಿ ವೈದ್ಯೆ ಡಾ. ಯಶಸ್ವಿನಿ ಚಿರತೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಬಾವಿಯಲ್ಲಿದ್ದ ಚಿರತೆ ಬಳಲಿದ್ದು, ಹೆಚ್ಚಿನ ಇತರ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ. ರಕ್ಷಿಸಲಾದ ಚಿರತೆ ಸುಮಾರು ಮೂರು ವರ್ಷ ವಯಸ್ಸಿನ ಹೆಣ್ಣು ಚಿರತೆಯಾಗಿದ್ದು, ಆರೋಗ್ಯವಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಾಡಿನಲ್ಲಿ ಸ್ವತಂತ್ರವಾಗಿ ಬದುಕಲು ಚಿರತೆ ಸಂಪೂರ್ಣವಾಗಿ ಸಮರ್ಥವಾಗಿದ್ದು, ಯಾವುದೇ ಗಂಭೀರ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ.