ಪತ್ನಿಯ ಅಸಹಜ ಸಾವಿನ ಬೆನ್ನಲ್ಲೇ ಪತಿ ಆತ್ಮಹತ್ಯೆ
Wednesday, September 23, 2026
ಬೆಳ್ತಂಗಡಿ: ಪತ್ನಿಯ ಮೃತದೇಹ ಅಸಹಜ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಮನೆಯಲ್ಲಿ ಪತಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ಶಿಶಿಲ ಗ್ರಾಮದಲ್ಲಿ ಸಂಭವಿಸಿದೆ.
ಇಲ್ಲಿಯ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಎಂಬವರೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಎರಡು ಮೂರು ದಿನಗಳಿಂದ ತನಿಯಪ್ಪ ಅವರು ಎಲ್ಲಿಯೂ ಪತ್ತೆಯಾಗದ ಕಾರಣ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹುಡುಕಾಟ ನಡೆಸಿದಾಗ ತನಿಯಪ್ಪ ಗೌಡರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇಂದು ಕಂಡುಬಂದಿದೆ.
ಇತ್ತೀಚೆಗೆ ಅವರ ಪತ್ನಿ ಚಿನ್ನಮ್ಮ ಅವರ ಮೃತದೇಹವು ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ಅವರು ಮೃತರ ಮರಣದಲ್ಲಿ ಸಂಶಯ ಕಂಡು ಬರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಪತಿ ತನಿಯಪ್ಪ ಅವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.