ದಾವಣಗೆರೆ ಮೂಲದ ಯುವಕನ ಕೊಲೆ ಪ್ರಕರಣ: ಆರೋಪಿಯ ಬಂಧನ
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ನಿವಾಸಿ ರಾಮ್ ನಾಯಕ್ ಅಲಿಯಾಸ್ ರಮೇಶ್ (31) ಬಂಧಿತ ಆರೋಪಿ. ಮಂಜೇಶ್ವರ ಪೊಲೀಸ್ ಇನ್ ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದ ತಂಡ ಶನಿವಾರ ರಾತ್ರಿ ಮಂಗಳೂರಿನ ಪಡೀಲ್ನಲ್ಲಿ ಆರೋಪಿಯನ್ನು ಬಂಧಿಸಿದೆ. ಕೊಲೆಯ ಬಳಿಕ ಊರಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ಕರ್ನಾಟಕದ ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ರಮೇಶ್ (38) ಅಂಗಡಿಪದವುನಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡುತ್ತಿದ್ದರು. ಸೆ.4 ರಂದು ಸಂಜೆ ಅವರು ವಾಸವಿದ್ದ ಹಳೆಯ ಎರಡು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ರಮೇಶ್ ಅವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕೊಲೆಯಾದ ರಮೇಶ್ ಮತ್ತು ಆರೋಪಿ ರಾಮ್ ನಾಯಕ್ ಸ್ನೇಹಿತರಾಗಿದ್ದರು. ಘಟನೆ ನಡೆದ ದಿನ ಸಂಜೆ ಇಬ್ಬರೂ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತಿನ ತಕರಾರು ಉಂಟಾಗಿತ್ತು. ಈ ವೇಳೆ ರಮೇಶ್‌ರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಅಡುಗೆಮನೆಯಲ್ಲಿ ರಮೇಶ್ ಮೃತಪಟ್ಟ ಸ್ಥಿತಿಯಲ್ಲಿ ಗಮನಿಸಿದ ಸಮೀಪದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧನ ಕಾರ್ಯಾಚರಣೆಯಲ್ಲಿ ಎಸ್ಸೈಗಳಾದ ಶಬರೀಕೃಷ್ಣನ್, ಅರ್ಜುನ್ ಹಾಗೂ ಪೊಲೀಸ್ ಸ್ಕ್ವಾಡ್ ಸದಸ್ಯರಾದ ಸುಧಾಕರನ್, ಸಜಿತ್, ರಾಜೇಶ್ ಮತ್ತು ಜಿನೇಶ್ ಪಾಲ್ಗೊಂಡಿದ್ದರು.