ಹೆತ್ತ ತಾಯಿಯನ್ನೇ ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ!
ಘಟನೆಯ ವಿವರ:
ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೇಣೈ ಅವರು ಗಮನಿಸಿದ್ದಾರೆ. ಕೂಡಲೇ ಅವರು ಸಮಾಜಸೇವಕ ಉಡುಪಿಯ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಅವರು ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಸುರಕ್ಷಿತವಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಆಸ್ಪತ್ರೆಗೆ ಸೇರಿಸಿದವರ ಎದುರು ಕಣ್ಣೀರಿಟ್ಟ ವೃದ್ಧೆ:
ಆಸ್ಪತ್ರೆಯ ದಾಖಲಾತಿ ವೇಳೆ ತಮ್ಮ ಹೆಸರು ಸರಸ್ವತಿ (70) ಹಾಗೂ ತಮಿಳುನಾಡಿನ ತಿರುವಳ್ಳೂವೂರು ನಿವಾಸಿ ಎಂದು ತಿಳಿಸಿದ್ದಾರೆ. ತಮ್ಮ ಸ್ವಂತ ಮಗನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ!!
ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಬ್ರಹ್ಮಾವರ ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ವೃದ್ಧೆಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲನೆ ನಡೆಯಬೇಕಿದ್ದು, ಆಕೆಯ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಕ್ರಮವಹಿಸಲಾಗಿದೆ.