ಮದುವೆಯಾಗುವುದಾಗಿ ನಂಬಿಸಿ 1.91 ಲಕ್ಷ ವಂದನೆ
ಮಂಗಳೂರು: ತಾನು ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿದ್ದು, ಮದುವೆಯಾಗಲು ಭಾರತಕ್ಕೆ ಬರುತ್ತಿರುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 1.91 ಲಕ್ಷ ರೂ. ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
45 ವರ್ಷ ವಯಸ್ಸಿನ ಮಹಿಳೆ ಜೂನ್ ತಿಂಗಳಿನಲ್ಲಿ ಮ್ಯಾಟ್ರಿಮೊನಿ ಆಪ್ ಒಂದನ್ನು ತನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ತನ್ನ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಂಡಿದ್ದರು. ಸೆ.5 ರಂದು ಅಪರಿಚಿತ ವ್ಯಕ್ತಿ ಮಹಿಳೆಗೆ ಕರೆ ಮಾಡಿ ತಾನು ಡಾ. ಸುರೇಶ್ ಎಂದು ಪರಿಚಯಿಸಿಕೊಂಡು ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿರುವುದಾಗಿ ತಿಳಿಸಿದ್ದಾನೆ. ಅನಂತರ ಮಹಿಳೆಗೆ ವಾಟ್ಸಾಪ್ ಕರೆ ಮಾಡಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ವಾಟ್ಸಾಪ್ ಕರೆಯಲ್ಲಿ ಮಾತನಾಡುತ್ತಿದ್ದರು. ಆತ ಲಂಡನ್ನಿಂದ ಬಂದು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಸೆ.14 ರಂದು ಲಂಡನ್ನಿಂದ ಬರುತ್ತಿರುವುದಾಗಿ ತಿಳಿಸಿದ್ದು, ಸೆ.15 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡುವುದಾಗಿಯೂ, ಇದಕ್ಕೆ ಭಾರತೀಯ ಹಣ ತನ್ನ ಬಳಿ ಇಲ್ಲವೆಂದು ತಿಳಿಸಿ ಮೊದಲಿಗೆ 42,500 ರೂ. ಹಣವನ್ನು ಗೂಗಲ್ ಪೇ ಮಾಡುವಂತೆ ತಿಳಿಸಿದ್ದರಿಂದ ಮಹಿಳೆಯು ಆತ ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.
ಅನಂತರ ಕಸ್ಟಮ್ಸ್ ಅಧಿಕಾರಿಯು ತನ್ನ ಲಗೇಜು ಹಾಗೂ ಫೋನ್ ವಶಪಡಿಸಿಕೊಂಡಿದ್ದು ಅವರಿಗೆ 1,49,000 ರೂ. ನೀಡಬೇಕೆಂದು ತಿಳಿಸಿದ್ದರಿಂದ ಮಹಿಳೆ ಹಣ ವರ್ಗಾವಣೆ ಮಾಡಿದ್ದಾರೆ. ಅನಂತರ ಆತ 3 ಲಕ್ಷ ರೂ. ನೀಡಬೇಕೆಂದು ತಿಳಿಸಿದಾಗ ಮಹಿಳೆಗೆ ಅನುಮಾನ ಬಂದಿದೆ. ಆರೋಪಿಯು ಹಂತ ಹಂತವಾಗಿ ಒಟ್ಟು 1,91,500 ರೂ.ಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.